ಅಷ್ಟವಿಧಾರ್ಚನೆಯ ಮಾಡಿ ಒಲಿಸುವೆನೆ ಅಯ್ಯಾ

Category: ವಚನಗಳು

Author: ಅಕ್ಕಮಹಾದೇವಿ

ಅಷ್ಟವಿಧಾರ್ಚನೆಯ ಮಾಡಿ ಒಲಿಸುವೆನೆ ಅಯ್ಯಾ
ನೀನು ಬಹಿರಂಗವ್ಯವಹಾರದೂರಸ್ಥನು.
ಅಂತರಂಗದಲ್ಲಿ ಧ್ಯಾನವ ಮಾಡಿ ಒಲಿಸುವೆನೆ ಅಯ್ಯಾ
ನೀನು ವಾಙ್ಮನಕ್ಕತೀತನು.
ಜಪಸ್ತೋತ್ರದಿಂದ ಒಲಿಸುವೆನೆ ಅಯ್ಯಾ
ನೀನು ನಾದಾತೀತನು.
ಭಾವe್ಞನದಿಂದ ಒಲಿಸುವೆನೆ ಅಯ್ಯಾ
ನೀನು ಮತಿಗತೀತನು.
ಹೃದಯ ಕಮಲಮಧ್ಯದಲ್ಲಿ ಇಂಬಿಟ್ಟುಕೊಂಬೆನೆ ಅಯ್ಯಾ
ನೀನು ಸರ್ವಾಂಗ ಪರಿಪೂರ್ಣನು.
ಒಲಿಸಲೆನ್ನಳವಲ್ಲ ನೀನೊಲಿವುದೆ ಸುಖವಯ್ಯಾ ಚೆನ್ನಮಲ್ಲಿಕಾರ್ಜುನಯ್ಯಾ.