ಬಿನ್ನಹಕೆ ಬಾಯಿಲ್ಲವಯ್ಯ
Category: ಶ್ರೀಕೃಷ್ಣ
Author: ಪುರಂದರದಾಸ
ಬಿನ್ನಹಕೆ ಬಾಯಿಲ್ಲವಯ್ಯ
ಅನಂತ ಅಪರಾಧ ಎನ್ನೊಳಗೆ ಇರಲಾಗಿ ||
ಶಿಶುಮೋಹ ಸತಿಮೋಹ ಜನನಿ-ಜನಕರ ಮೋಹ
ರಸಿಕ ಭ್ರಾತರ ಮೋಹ ರಾಜಮೋಹ |
ಪಶುಮೋಹ ಭೂಮೋಹ ಬಂಧುವರ್ಗದ ಮೋಹ
ಅಸುರಾರಿ ನಿನ್ನ ಮರೆತೆನೋ ಕಾಯೋ ಹರಿಯೇ ||
ಅನ್ನಮದ ಅರ್ಥಮದ ಅಖಿಲ ವೈಭವದ ಮದ
ಮುನ್ನ ಪ್ರಾಯದ ಮದವು ರೂಪಮದವು |
ತನ್ನ ಸತ್ವದ ಮದ ಧಾತ್ರಿವಶದ ಮದ
ಇನ್ನು ತನಗೆದುರಿಲ್ಲವೆಂತೆಂಬ ಮದದಿಂದ ||
ಇಷ್ಟು ದೊರಕಿದರೆ ಮತ್ತಿಷ್ಟು ಬೇಕೆಂಬಾಸೆ
ಅಷ್ಟು ದೊರಕಿದರೆ ಮತ್ತಿಷ್ಟರಾಸೆ |
ಕಷ್ಟ ಬೇಡೆಂಬಾಸೆ ಕಡುಸುಖವ ಕಾಂಬಾಸೆ
ನಷ್ಟಜೀವನದಾಸೆ ಪುರಂದರವಿಟ್ಠಲ ||