ಬೇವು ಬೆಲ್ಲದೊಳಿಡಲೇನು ಫಲ

Category: ಶ್ರೀಕೃಷ್ಣ

Author: ಪುರಂದರದಾಸ

ಬೇವು ಬೆಲ್ಲದೊಳಿಡಲೇನು ಫಲ
ಹಾವಿಗೆ ಹಾಲೆರೆದೇನು ಫಲ ||

ಕುಟಿಲವ ಬಿಡದಿಹ ಮನುಜರು ಮಂತ್ರವ
ಪಠನೆಯ ಮಾಡಿದರೇನು ಫಲ |
ಸಟೆಯನ್ನಾಡುವ ಮನುಜರು ಸಂತತ
ನಟನೆಯ ಮಾಡಿದರೇನು ಫಲ ||

ಕಪಟತನದಲಿ ಕಾಡುತ ಜನರನು
ಜಪವನು ಮಾಡಿದರೇನು ಫಲ |
ಕುಪಿತತನವನು ಬಿಡದೆ ನಿರಂತರ
ಉಪವಾಸ ಮಾಡಿದರೇನು ಫಲ ||

ಮಾತಾಪಿತರನು ಬಳಲಿಸಿದಾತನು
ಯಾತ್ರೆಯ ಮಾಡಿದರೇನು ಫಲ |
ಘಾತಕತನವನು ಬಿಡದೆ ನಿರಂತರ
ಗೀತಯನೋದಿದರೇನು ಫಲ ||

ಹೀನಗುಣಂಗಳ ಹಿಂಗದೆ ಗಂಗೆಯ
ಸ್ನಾನವ ಮಾಡಿದರೇನು ಫಲ |
ಶ್ರೀನಿಧಿ ಪುರಂದರವಿಟ್ಠಲನ ನೆನೆಯದೆ
ಮೌನವ ಮಾಡಿದರೇನು ಫಲ ||