ಮಣಿಯಲೆನ್ನ ಶಿರವು
Category: ಶ್ರೀಗುರು
Author: ಕುವೆಂಪು
ಮಣಿಯಲೆನ್ನ ಶಿರವು ನಿನ್ನ ಚರಣಧೂಳಿ ತಲದಲಿ |
ನನ್ನ ಅಹಂಕಾರವೆಲ್ಲ ಮುಳುಗಲಶ್ರುಜಲದಲಿ ||
ನನಗೆ ನಾನೆ ಪೂಜೆಗೈಯೆ ಸೊಡರನೆತ್ತಲು
ಬೆಳಕು ಬರುವ ಬದಲು ಅಯ್ಯೋ ಬರಿಯ ಕತ್ತಲು
ಅಹಂಕಾರದಂಧಕಾರ ಮುತ್ತುತಿದೆ ಸುತ್ತಲು ||
ನನ್ನ ನಾನೆ ಮೆರೆಯದಂತೆ ನಾನು ಗೈವ ಕರ್ಮದಿ
ನಿನ್ನ ಇಚ್ಛೆ ಪೂರ್ಣವಾಗಲೆನ್ನ ಜೀವಧರ್ಮದಿ |
ತಳೆಯಲೆನ್ನ ಜ್ಞಾನ ನಿನ್ನ ಚರಮ ಶಾಂತಿಯ
ಬೆಳಗಲೆನ್ನ ಪ್ರಾಣ ನಿನ್ನ ಪರಮ ಕಾಂತಿಯ
ನನ್ನನಳಿಸು ನೀನೆ ನೆಲಸು ಹೃದಯಪದ್ಮದಲದಲಿ ||