ನಾನುಣ್ಣದ ಮುನ್ನವೆ ಜಂಗಮಕ್ಕೆ
Category: ವಚನಗಳು
Author: ಅಕ್ಕಮಹಾದೇವಿ
ನಾನುಣ್ಣದ ಮುನ್ನವೆ ಜಂಗಮಕ್ಕೆ
ಅಮೃತಾನ್ನಾದಿ ನೈವೇದ್ಯವ ನೀಡುವೆ.
ನಾನುಡದ ಮುನ್ನವೆ ಜಂಗಮಕ್ಕೆ
ದೇವಾಂಗಾದಿ ವಸ್ತ್ರವನುಡಿಸುವೆ.
ನಾನು ಹೂಸದ ಮುನ್ನವೆ ಜಂಗಮಕ್ಕೆ
ಸುಗಂಧಾದಿ ಪರಿಮಳದ್ರವ್ಯವ ಹೂಸುವೆ.
ನಾನು ಮುಡಿಯದ ಮುನ್ನವೆ ಜಂಗಮಕ್ಕೆ
ಪರಿಪರಿಯ ಪುಷ್ಪವ ಮುಡಿಸುವೆ.
ನಾನು ತೊಡದ ಮುನ್ನವೆ
ಜಂಗಮಕ್ಕೆ ತೊಡಿಗೆಯ ತೊಡಿಸುವೆ.
ನಾನಾವಾವ ಭೋಗವ ಭೋಗಿಸುವದ
ಜಂಗಮಕ್ಕೆ ಭೋಗಿಸಲಿತ್ತು,
ಆ ಶೇಷಪ್ರಸಾದವ ಲಿಂಗಕ್ಕಿತ್ತು.
ಭೋಗಿಸಿದ ಬಳಿಕಲಲ್ಲದೆ ಭೋಗಿಸಿದಡೆ ಬಸವಣ್ಣಾ,
ನಿಮ್ಮಾಣೆಯಯ್ಯಾ ಚೆನ್ನಮಲ್ಲಿಕಾರ್ಜುನಾ.