ಮಾಡಬಾರದ ಮಾಡಿ

Category: ಶ್ರೀಶಾರದಾದೇವಿ

Author: ಸ್ವಾಮಿ ಶಾಸ್ತ್ರಾನಂದ

ಮಾಡಬಾರದ ಮಾಡಿ, ಆಗಬಾರದು ಆಗಿ
ಬಾಳೆಲ್ಲ ಬರಿದಾಗಿ, ಗೋಳೊಂದೆ ಉಳಿದಾಗ
ಅಂತರಾಳದಿ ಬೆಳಗಿ, ಸಂತಸವ ಕರುಣಿಸಿಹೆ
"ಏಳು ಮಗು, ನಾನಿಹೆನು !" ಎನ್ನುತ್ತ ಕರೆದೆ ||

ಅವರಿವರ ಉಪದೇಶ ಬರಿಯ ಬಾಯ್ಮಾತಾಗಿ
ರವಿರಹಿತ ಕತ್ತಲೆಯೆ ಎತ್ತೆತ್ತ ಕವಿದಾಗ
ಕರುಣಿಸಿಹೆ ಓ ತಾಯಿ, ತವ ಚರಣದಾಶ್ರಯವ
“ಬಾ ಕಂದ, ಇಹೆ ನಾನು, ಕುಂದದಿರು” ಎಂದು ||

ಜಗವೆಲ್ಲ ಕೈಬಿಟ್ಟು ಮತಿಗೆಟ್ಟು, ಗತಿಗೆಟ್ಟು,
ಆವುದನು ಗೈಯಲೂ ತ್ರಾಣವಿಲ್ಲದ ಎನಗೆ
"ನಾನೆ ಸಾಧನೆ ಸಿದ್ದಿ ಗತಿ ಆಸರೆಯು ನಿನಗೆ"
ಎನ್ನುತ್ತ ವರವಿತ್ತ ಗುರು-ದೈವ-ಜನನಿ ||