ಮುತ್ತು ಒಡೆದಡೆ ಬೆಸೆಯಬಹುದೆ ?

Category: ವಚನಗಳು

Author: ಅಕ್ಕಮಹಾದೇವಿ

ಮುತ್ತು ಒಡೆದಡೆ ಬೆಸೆಯಬಹುದೆ ?
ಮನ ಮುರಿದಡೆ ಸಂತಕ್ಕೆ ತರಬಹುದೆ ?
ಅಪ್ಪುಗೆ ಸಡಲಿದ ಸುಖವ ಮರಳಿ ಅರಸಿದರುಂಟೆ ?
ಸಾಧಕನೊಯಿದ ನಿಧಾನದ ಕುಳಿಯಂತೆ ಅಲ್ಲಿ ಏನುಂಟು ?
ಮಚ್ಚು ಪಲ್ಲಟವಾಗಿ, ನೋಟದ ಸುಖವ ಹಿಂಗಿದರೊಳವೆ ?
ನೋಡದಿರು, ಕಾಡದಿರು, ಮನಬಳಸದಿರು.
ಭಾಷೆಗೆ ತಪ್ಪಿದರೆ ಮುಳ್ಳುಮೊನೆಯ ಕಿಚ್ಚಿನಂತೆ.
ಲೇಸು ಬೀಸರವೋಗದ ಮುನ್ನ ಚೆನ್ನಮಲ್ಲಿಕಾರ್ಜುನನ ಕೂಡಿ ಧಾತುಗೆಟ್ಟ ಬಳಿಕ ಒಳವೆ ?