ಲಿಂಗದಿಂದುದಯಿಸಿ ಅಂಗವಿಡಿದಿಪ್ಪ ಪುರಾತನರ
Category: ವಚನಗಳು
Author: ಅಕ್ಕಮಹಾದೇವಿ
ಲಿಂಗದಿಂದುದಯಿಸಿ ಅಂಗವಿಡಿದಿಪ್ಪ ಪುರಾತನರ
ಇಂಗಿತವನೇನೆಂದು ಬೆಸಗೊಂಬಿರಯ್ಯಾ ?
ಅವರ ನಡೆಯೇ ಆಗಮ, ಅವರ ನುಡಿಯೇ ವೇದ ;
ಅವರ ಲೋಕದಮಾನವರೆಂದೆನ್ನಬಹುದೆ ಅಯ್ಯಾ ?
ಅದೆಂತೆಂದಡೆ, ಸಾಕ್ಷಿ
'ವೃಕ್ಷದ್ಭವತಿ ಬೀಜಂ ಹಿ ತದ್‍ವೃಕ್ಷೇ ಲೀಯತೇ ಪುನಃ ೀ
ರುದ್ರಲೋಕಂ ಪರಿತ್ಯಕ್ತಾ ಶಿವಲೋಕೇ ಭವಿಷ್ಯತಿ || '
ಎಂದುದಾಗಿ,
ಅಂಕೋಲೆಯಬೀಜದಿಂದಾಯಿತ್ತು ವೃಕ್ಷವು ;
ಆ ವೃಕ್ಷ ಮರಳಿ ಆ ಬೀಜದೊಳಡಗಿತ್ತು.
ಆ ಪ್ರಕಾರದಲ್ಲಿ ಲಿಂಗದೊಳಗಿಂದ ಪುರಾತನರುದ್ಭವಿಸಿ,
ಮರಳಿ ಆ ಪುರಾತನರು ಆ ಲಿಂಗದೊಳಗೆ
ಬೆರಸಿದರು ನೋಡಿರಯ್ಯಾ.
ಇಂತಪ್ಪ ಪುರಾತನರಿಗೆ ನಾನು ಶರಣೆಂದು ಹುಟ್ಟುಗೆಟ್ಟೆನಯ್ಯಾ ಚೆನ್ನಮಲ್ಲಿಕಾರ್ಜುನಾ.