ಯಾರ ಮಹಿಮಾ ಜ್ಯೋತಿ
Category: ಪರಬ್ರಹ್ಮ
Author: ವಚನವೇದ
ದುರ್ಗಾ -
ಯಾರ ಮಹಿಮಾ ಜ್ಯೋತಿ ಜಗವನು
ಅಮೃತದಂದದಿ ಎಲ್ಲರೆದೆಯನು
ತುಂಬಿ ರೋಮಾಂಚನವ ಗೈವುದೋ
ಅಂಥ ಪ್ರೇಮದ ಜಲಧಿಯ
ಜೀವ ನಿನ್ನೊಳಗಿರುವವರೆಗೂ
ಸಾರು ಆತನ ಮಹಿಮೆಯ ||
ಭೀಮಪಲಾಸೀ -
ಯಾರ ಶ್ರೀಶುಭನಾಮ ಹೃದಯದ
ಕೊರಗನೆಲ್ಲ ಕಳೆವುದೋ
ಯಾರು ನೆಲ ಜಲ ಗಗನ ದೇಶವ -
ನೆಲ್ಲ ವ್ಯಾಪಿಸಿ ನಿಲುವರೋ ||
ಬೇಹಾಗ್ -
ಯಾರ ಅನ್ವೇಷಣೆಯಲೀ ಜಗ
ಬರಿದೆ ತೊಳಲುತಲಿರುವುದೋ
ಅಂಥ ದೇವನ ತಿಳಿದು ಬಣ್ಣಿಪ
ಶಕ್ತಿ ಯಾರಿಗೆ ಲಭಿಸಿದೆ
ಅವನ ಮಹಿಮೆಗೆ ಪಾರವೆಲ್ಲಿದೆ
ಆದಿ ಅಂತ್ಯಗಳೆಲ್ಲಿವೆ ||
ಪೂರಿಯಾ ಧನಾಶ್ರೀ -
ನಿಜದ ತಿಳಿವಿನ ತವರು ಅವನು
ನಿತ್ಯ ಜೀವನ ಚೇತನ
ನಿತ್ಯ ಜಾಗೃತ ನಿರ್ನಿಮೇಷನು
ದಿವ್ಯ ಶುದ್ಧ ನಿರಂಜನ
ಅವನ ದರುಶನ ಎದೆಯ ಕಿಲುಬನು
ತೊಳೆದು ಗೈವುದು ಪಾವನ ||