ಇನಿತಾದರೂ ನಿನಗೆ ಮತಿಯಿಲ್ಲವೆ

Category: ಶ್ರೀಕೃಷ್ಣ

Author: ವಿಜಯದಾಸ

ಇನಿತಾದರೂ ನಿನಗೆ ಮತಿಯಿಲ್ಲವೇ ಮನವೆ |
ಹೀನಾಯ ಮಾಡದಿರು ಪರದೋಷಗಳನೆಣಿಸಿ ||

ಅವನ ಬಯ್ಯುವೆ ಯಾಕೆ ಅವನ್ಯಾರು ನೀನ್ಯಾರು
ಅವನ ಪಾಪಕೆ ನೀನು ಭಾಗಿಯಾದೆ |
ಅವನು ಉತ್ತಮನಾದರವನು ಬದುಕಿದ ಕಾಣೊ
ಅವ ಪುಣ್ಯ ಮಾಡಿದರೆ ಅವನ ಕುಲ ಉದ್ದಾರ ||

ನೀನು ಪಡೆವುದರಲ್ಲಿ ಬೇಡಬಂದವನಲ್ಲ
ನಿನಗು ಅವನಿಗು ಏನು ಸಂಬಂಧವೊ |
ಮನೆ ಒಡವೆ ವಸ್ತ್ರಗಳ ಭಾಗ ಕೇಳುವುದಿಲ್ಲ
ಕ್ಷಣಕ್ಷಣಕೆ ಸಂದೇಹ ಮಾಡಿಕೊಂಬುದು ಸಲ್ಲ ||

ನಿನ್ನ ಗತಿ ಮಾರ್ಗಕ್ಕೆ ಅವ ನಡೆದು ಬರುವನೇ
ನಿನ್ನಿಂದ ಪರಲೋಕ ಅವಗೆ ಉಂಟೆ |
ನಿನ್ನೊಳಗೆ ನೀ ತಿಳಿದು ಶ್ರೀವಿಜಯವಿಟ್ಠಲನ್ನ
ಸನ್ನುತಿಸಿ ಭವರೋಗವನು ಕಳೆದುಕೊಳ್ಳಯ್ಯ ||