ರಾಗಿ ತಂದೀರ್ಯಾ

Category: ಶ್ರೀಕೃಷ್ಣ

Author: ಪುರಂದರದಾಸ

ರಾಗಿ ತಂದೀರ್ಯಾ ಭಿಕ್ಷಕೆ ರಾಗಿ ತಂದೀರ್ಯಾ |
ಯೋಗ್ಯರಾಗಿ ಭೋಗ್ಯರಾಗಿ
ಭಾಗ್ಯವಂತರಾಗಿ ನೀವು ||

ಅನ್ನದಾನವ ಮಾಡುವರಾಗಿ
ಅನ್ನಛತ್ರವನಿಟ್ಟವರಾಗಿ |
ಅನ್ಯವಾರ್ತೆಯ ಬಿಟ್ಟವರಾಗಿ
ಅನುದಿನ ಭಜನೆಯ ಮಾಡುವರಾಗಿ ||

ಮಾತಾಪಿತರನು ಸೇವಿಪರಾಗಿ
ಪಾಪಕಾರ್ಯವ ಬಿಟ್ಟವರಾಗಿ |
ರೀತಿಯ ಬಾಳನು ಬಾಳುವರಾಗಿ
ನೀತಿಮಾರ್ಗದಲಿ ಖ್ಯಾತರಾಗಿ ||

ಗುರುಕಾರುಣ್ಯವ ಪಡೆದವರಾಗಿ
ಗುರುವಾಕ್ಯವನು ಪಾಲಿಪರಾಗಿ |
ಗುರುವಿನ ಪಾದವ ಸ್ಮರಿಸುವರಾಗಿ
ಪರಮಪುಣ್ಯವ ಮಾಡುವರಾಗಿ ||

ಕಾಮಕ್ರೋಧವ ಅಳಿದವರಾಗಿ
ನೇಮನಿಷ್ಠೆಗಳ ಮಾಡುವರಾಗಿ |
ರಾಮನಾಮವ ಜಪಿಸುವರಾಗಿ
ಪ್ರೇಮದಿ ಕುಣಿಕುಣಿದಾಡುವರಾಗಿ ||

ಹರಿಯನು ಅನುದಿನ ನೆನೆಯುವರಾಗಿ
ಗುರುತಿಗೆ ಬಾಹೋರಂಥವರಾಗಿ |
ಕರೆಕರೆ ಭವವನು ನೀಗುವರಾಗಿ
ಪುರಂದರವಿಟ್ಠಲನ ಸೇವಿಪರಾಗಿ ||