ರಾಘವ ನೀ ಬಾ

Category: ಶ್ರೀರಾಮ

Author: ಸ್ವಾಮಿ ಹರ್ಷಾನಂದ

ರಾಘವ ನೀ ಬಾ ರಘುಕುಲನಂದನ
ಅಘಮರ್ಷಣನೇ ನೀ ಬಾರೋ |
ದಶಮುಖರಾವಣನ ಲಂಕೆಲಿ ಮಡುಹಿದ
ಕೌಸಲ್ಯಾತನಯನೇ ನೀ ಬಾರೋ ||

ಧನುರ್ಬಾಣವ ಕರದಲಿ ಧರಿಸಿದ
ದನುಜಕುಲಾಂತಕ ನೀ ಬಾರೋ |
ಇನವಂಶವನು ಪಾವನಗೈದ
ಮನುಜಶ್ರೇಷ್ಠನೇ ನೀ ಬಾರೋ ||

ಅಹಲ್ಯೋದ್ದಾರಕ ತಾಟಕಿಘಾತಕ
ಅಹರಹ ಭಜಿಸುವೆ ನೀ ಬಾರೋ |
ಇಹದಲಿ ಪರದಲಿ ಗತಿ ನೀನೆನ್ನುತ
ತಹತಹ ಪಡುತಿಹೆ ನೀ ಬಾರೋ ||

ಪಿತೃಭಕ್ತನೇ ಸತ್ಯಶೀಲನೇ
ಸತತವು ನಿನ್ನನೇ ಸ್ತುತಿಸುವೆ ಬಾರೋ |
ನತಜನರನು ಪರಿಪಾಲಿಸುವವನೇ
ಸೀತಾರಮಣಾ ನೀ ಬಾರೋ ||