ಅಯ್ಯಾ, ನಿಮ್ಮ ದೇವರೆಂದು ನಂಬಿ

Category: ವಚನಗಳು

Author: ಬಸವಣ್ಣ

ಅಯ್ಯಾ, ನಿಮ್ಮ ದೇವರೆಂದು ನಂಬಿ ಪೂಜಿಸಲಾಗದಯ್ಯಾ :
ಮೀನಜ, ರೋಮಜ ಮಹಾಮುನಿಗಳ ಲಯವ ಮಾಡುವುದ ನಾ
ಬಲ್ಲೆನಾಗಿ. ಅಯ್ಯಾ ನಿಮ್ಮ ದೇವರೆಂದು ನಂಬಿ ಪೂಜಿಸಲಾಗದಯ್ಯಾ :
ನವಕೋಟಿಬ್ರಹ್ಮರಿಗೆ ಪ್ರಳಯವ ಮಾಡುವುದ ನಾ ಬಲ್ಲೆನಾಗಿ. ಅಯ್ಯಾ,
ನಿಮ್ಮ ದೇವರೆಂದು ನಂಬಿ ಪೂಜಿಸಲಾಗದಯ್ಯಾ : ದಶಕೋಟಿ ನಾರಾಯಣರಿಗೆ
ಮರಣವ ಮಾಡುವುದ ನಾ ಬಲ್ಲೆನಾಗಿ. ಅಯ್ಯಾ, ನಿಮ್ಮ ದೇವರೆಂದು ನಂಬಿ
ಪೂಜಿಸಲಾಗದಯ್ಯಾ :ಅನಂತಕೋಟಿರುದ್ರರಿಗೆ ಲಯವ ಮಾಡುವುದ ನಾ ಬಲ್ಲೆನಾಗಿ.
ಅಯ್ಯಾ, ನಿಮ್ಮ ದೇವರೆಂದು ನಂಬಿ ಪೂಜಿಸಲಾಗದಯ್ಯಾ : ಎನ್ನನೇಳೇಳು ಭವಕ್ಕೆ
ತಂದಲ್ಲಿ,ಆನುಭಯಲಿಂಗಜಂಗಮದ ಮೊರೆಹೊಕ್ಕು ಭವಂ ನಾಸ್ತಿಯಾಗಿ ಬದುಕಿದೆನಯ್ಯಾ,
ಕೂಡಲಸಂಗಮದೇವಾ.