ಅರ್ಥವನರ್ಥವ ಮಾಡಿ ಕೋಳಾಹಳಂಗೆಯ್ಯುತ್ತಿರಲಿ
Category: ವಚನಗಳು
Author: ಬಸವಣ್ಣ
ಅರ್ಥವನರ್ಥವ ಮಾಡಿ ಕೋಳಾಹಳಂಗೆಯ್ಯುತ್ತಿರಲಿ, ಹುಟ್ಟಿದ ಮಕ್ಕಳ ನವಖಂಡವ ಮಾಡಿ ಕಡಿವುತ್ತಿರಲಿ, ಮುಟ್ಟುವ ಸ್ತ್ರೀಯ ಕಣ್ಣಮುಂದೆ ಅಭಿಮಾನಂಗೊಂಡು ನೆರೆವುತ್ತಿರಲಿ, ಇಂತೀ ತ್ರಿವಿಧವೂ ಹೊರಗಣವು. ಇನ್ನೆನ್ನಂಗದ ಮೇಲೆ ಬರಲಿ, ಹಿಡಿಖಂಡವ ಕೊಯ್ಯಲಿ, ಇಕ್ಕುವ ಶೂಲ ಪ್ರಾಪ್ತಿಸಲಿ, ಹಾಕೊಂದೆಸೆ ಹನ್ನೊಂದೆಸೆಯಾಗಿ ಮಾಡುತ್ತಿರಲಿ. ಮತ್ತೆಯೂ ಲಿಂಗಾರಾಧನೆಯ ಮಾಡುವೆ, ಜಂಗಮಾರಾಧನೆಯ ಮಾಡುವೆ, ಪ್ರಸಾದಕ್ಕೆ ತಪ್ಪೆ. ಇಂತಪ್ಪ ಭಾಷೆ ಕಿಂಚಿತ್ತು ಹುಸಿಯಾದಡೆ ನೀನಂದೆ ಮೂಗ ಕೊಯಿ, ಕೂಡಲಸಂಗಮದೇವಾ.