ಈ ಪರಿಯ ಸೊಬಗಾವ
Category: ಶ್ರೀಕೃಷ್ಣ
Author: ಪುರಂದರದಾಸ
ಈ ಪರಿಯ ಸೊಬಗಾವ ದೇವರಲಿ ನಾ ಕಾಣೆ
ಗೋಪೀಜನಪ್ರಿಯ ಗೋಪಾಲಗಲ್ಲದೆ ||
ದೊರೆಯತನದಲಿ ನೋಡೆ ಧರಣಿದೇವಿಗೆ ರಮಣ
ಸಿರಿಯತನದಲಿ ನೋಡೆ ಶ್ರೀಕಾಂತನು |
ಹಿರಿಯತನದಲಿ ನೋಡೆ ಸರಸಿಜೋದ್ಭವನಯ್ಯಾ
ಗುರುವುತನದಲಿ ನೋಡೆ ಜಗದಾದಿಗುರುವು ||
ಪಾವನತ್ವದಿ ನೋಡೆ ಅಮರಗಂಗಾಜನಕ
ದೇವತ್ವದಲಿ ನೋಡೆ ದಿವಿಜರೊಡೆಯ |
ಲಾವಣ್ಯದಲಿ ನೋಡೆ ಲೋಕಮೋಹಕನಯ್ಯಾ
ಆವ ಧೈರ್ಯದಿ ನೋಡೆ ಅಸುರಾಂತಕನು ||
ಗಗನದಲಿ ಸಂಚರಿಪ ಗರುಡದೇವನೆ ತುರಗ
ಜಗತೀಧರ ಶೇಷ ಪರ್ಯಂಕಶಯನ |
ನಿಗಮಗೋಚರ ನಮ್ಮ ಪುರಂದರವಿಟ್ಠಲಗಲ್ಲದೆ
ಮಿಗಿಲಾದ ದೈವಗಳಿಗೀ ಭಾಗ್ಯವುಂಟೇ ||