ಸ್ನಾನವ ಮಾಡಿರೊ ಜ್ಞಾನ ತೀರ್ಥದಲ್ಲಿ
Category: ಇತರೆ
Author: ಕನಕದಾಸ
ಸ್ನಾನವ ಮಾಡಿರೊ ಜ್ಞಾನತೀರ್ಥದಲ್ಲಿ
ಮಾನವರೆಲ್ಲ ಮೌನದೊಳಗೆ ನಿಂದು ||ಪ||
ತನ್ನ ತಾನರಿತುಕೊಂಬುದೆ ಒಂದು ಸ್ನಾನ
ಅನ್ಯಾಯ ಮಾಡದಿರುವುದೊಂದು ಸ್ನಾನ
ಅನ್ನದಾನವ ಮಾಡುವುದೊಂದು ಸ್ನಾನ- ಹರಿ
ನಿನ್ನ ಧ್ಯಾನವೆ ನಿತ್ಯ ಗಂಗಾಸ್ನಾನ ||1||
ಪರಸತಿಯ ಭ್ರಮಿಸದಿದ್ದರೆ ಒಂದು ಸ್ನಾನ
ಪರನಿಂದೆಯ ಮಾಡದಿದ್ದರೊಂದು ಸ್ನಾನ
ಪರೋಪಕಾರ ಮಾಡುವುದೊಂದು ಸ್ನಾನ
ಪರತತ್ತ್ವವನರಿತುಕೊಂಬುದೆ ಒಂದು ಸ್ನಾನ ||2||
ಸಾಧು ಸಜ್ಜನರ ಸಂಗವೆ ಒಂದು ಸ್ನಾನ
ಭೇದಾಭೇದವಳಿದಡೆ ಒಂದು ಸ್ನಾನ
ಆದಿಮೂರುತಿ ಕಾಗಿನೆಲೆಯಾದಿಕೇಶವನ
ಪಾದಧ್ಯಾನವೆ ನಿತ್ಯ ಗಂಗಾ ಸ್ನಾನ ||3||