ಜಯ ದೇವ ಜಯ ದೇವ ಜಯ ರಾಮಕೃಷ್ಣ

Category: ಶ್ರೀರಾಮಕೃಷ್ಣ

Author: ಹೆಚ್ ಎನ್ ಮುರಳೀಧರ

ಜಯ ದೇವ ಜಯ ದೇವ ಜಯ ರಾಮಕೃಷ್ಣ
ಸಾರದಾ ಶ್ರೀಪತಿ ಭಕ್ತಜನರ ಗತಿ ಯುಗದ ಅವತಾರ||

ತುತ್ತಿನ ವಿದ್ಯೆಗೆ ದೂರದಿ ನಿಂದೆ
ದೇವನ ವಿದ್ಯೆಯ ಗಳಿಸುವೆನೆಂದೆ|
ಧನಿಯಿಂದ ಭಿಕ್ಷೆಯ ಪಡೆಯುತಲಂದೆ
ಸತ್ಯದ ನೆಲೆಗೆ ನೀ ಸ್ಥಿರವಾಗಿ ಸಂದೆ||

ಶಿಲೆಯಲ್ಲವೀ ತಾಯಿ ನಿಜದ ಜಗದಂಬೆ
ಕಂಬನಿ ಧಾರೆಗೆ ಕರಗುವಳೆಂದೆ|
ತಾಯಿ ತಾಯಿ ಎಂದು ಕೂಗುತ ನೊಂದೆ
ಲೋಕವೆಲ್ಲವ ತಾಯ ಮಡಿಲಾಗಿ ಕಂಡೆ||

ಚಲಿಸದ ಬ್ರಹ್ಮವು ಚಲಿಸಲು ಶಕ್ತಿ
ಸುರುಳಿ ಸುತ್ತಿದ ಹಾವು ಹರಿವ ಸಂಗತಿ|
ಜ್ಞಾನವೊ ಭಕ್ತಿಯೊ ಸಿದ್ದಿಯ ಯುಕುತಿ
ತಿನ್ನು ಮಾವಿನಹಣ್ಣು ಜೀವಕೆ ತೃಪ್ತಿ ||

ಮತಗಳೆನಿತೊ ಅನಿತೆ ಪಥಗಳು ಎಂದೆ
ಹೆಸರದು ಹಲವಾರು ಉಸಿರು ತಾನೊಂದೆ!
ಸಾಧನೆಯ ದಾರಿ ತೆರೆದು ತೋರಿದೆ
ಹೆಸರಿನಾಚೆಯ ಬೆಳಕ ಭುವಿಗೆ ನೀಡಿದೆ||

ವಚನವೇದದ ಘೋಷ ಭವತಿಮಿರ ನಾಶ
ಸಂದೇಹವಿನಿತಿಲ್ಲ ಇದು ಸ್ವಪ್ರಕಾಶ|
ದೇವದೇವಿಯರೆಲ್ಲ ನಿನ್ನಲ್ಲೇ ವಾಸ
ಅಂಶ ಅಂಶಕೆ ಬಂತು ಪೂರ್ಣದ ಸ್ಪರ್ಶ||

ವಿವೇಕ ರಾಖಾಲ ಶಿಷ್ಯ ಸಂತತಿ
ಸಂಘರೂಪದಿ ಹರಡಿ ನವಯುಗ ಕೀರ್ತಿ|
ತ್ಯಾಗಕೆ ಸೇವೆಗೆ ಅಳಿಯದ ಸ್ಫೂರ್ತಿ
ಕೃಪೆಯ ಧಾರೆಯು ಸುರಿದು ನಿತ್ಯಸಂತೃಪ್ತಿ||