ದಯಾಸಾಗರ ನೀನು ದಾತಾರನೈ ನೀನು
Category: ಶ್ರೀರಾಮಕೃಷ್ಣ
Author: ಸ್ವಾಮಿ ಪುರುಷೋತ್ತಮಾನಂದ
ದಯಾಸಾಗರ ನೀನು ದಾತಾರನೈ ನೀನು
ನಾನೇಕೆ ದೀನನಾಗುಳಿಯಲಿನ್ನು ||
ಹೇ ದೇವ ನೀನೆನಗೆ ನೀಡಿರುವೆ ಕಣ್ಣೆರಡ
ಆದರವು ಕಾಣಲಾರವು ನಿನ್ನನು |
ನೀನಾದರೂ ನಿನ್ನ ಸಾಸಿರದ ನಯನದಿಂ
ನನ್ನ ದುರವಸ್ಥೆಯನು ಕಾಣೆಯೇನು ||
ನನಗೊಂದು ಹೃದಯವಿದೆ ಅದ ಕೊಟ್ಟವನು ನೀನೆ
ಆದರದು ಬತ್ತಿರುವ ಕೆರೆಯಂತಿದೆ
ನಿನ್ನ ಹೃದಯಸರೋವರದ ಸುಧೆಯನೊಂದಿಷ್ಟು
ನನ್ನೆದೆಗೆ ನೀನೇ ಹರಿಸಬಾರದೆ||
ಆನಂದಘನ ನೀನು ನಿನ್ನ ಪುತ್ರನು ನಾನು
ಬರಲಿ ಆ ಆನಂದ ಎನ್ನ ಎದೆಗೂ|
ನೀನು ನನ್ನವನಯ್ಯ ನಾನಂತು ನಿನ್ನವನೇ
ಇನ್ನೇಕೆ ಚಿಂತಿಸಲಿ ಯಾವ ಬಗೆಗೂ||