ರಾಮ ಮಂತ್ರವ ಜಪಿಸೋ

Category: ಶ್ರೀರಾಮ

Author: ಪುರಂದರದಾಸ

ರಾಮಮಂತ್ರವ ಜಪಿಸೋ ಹೇ ಮನುಜಾ ||

ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ
ಸೋಮಶೇಖರ ತನ್ನ ಭಾಮಿನಿಗೊರೆದಿಹ ||

ಕುಲಹೀನನಾದರೂ ಕೂಗಿ ಜಪಿಸುವ ಮಂತ್ರ
ಸರಿವ ಭೀತಿಯೊಳು ಉಚ್ಚರಿಪ ಮಂತ್ರ |

ಹಲವು ಪಾಪಂಗಳ ಹದಗೆಡಿಸುವ ಮಂತ್ರ
ಸುಲಭದಿಂದಲಿ ಸ್ವರ್ಗ ಸೂರೆಗೊಳ್ಳುವ ಮಂತ್ರ ||

ಸಕಲ ವೇದಗಳಿಗೆ ಸಾರವೆನಿಪ ಮಂತ್ರ
ಮುಕುತಿ ಮಾರ್ಗಕೆ ಇದೇ ಮೂಲಮಂತ್ರ |

ಭಕುತಿರಸಕೆ ಭವ್ಯ ಮಾರ್ಗ ತೋರುವ ಮಂತ್ರ
ಸುಖನಿಧಿ ಪುರಂದರವಿಟ್ಠಲನ ಮಹಾಮಂತ್ರ ||