ಶರಣು ಶರಣು ಸಂಬುದ್ಧ ಗುರು

Category: ಭಗವಾನ್ ಬುದ್ಧ

Author: ಜಿ.ಪಿ.ರಾಜರತ್ನಂ

ಶರಣು ಶರಣು ಸಂಬುದ್ಧ ಗುರು ಜ್ಞಾನ-
ದಯಾಸಮುದ್ರನೆ ಬುದ್ಧಗುರು |
ಲೋಕನಾಥಸಂಬುದ್ಧ ಗುರು ಆರ್ತ್ತ-
ತ್ರಾಣಪರಾಯಣ ಬುದ್ದ ಗುರು
ಶರಣು ಶರಣು ಸಂಬುದ್ಧ ಗುರು ||

ದೇಶ ಕೋಶ ಮನೆ ತಂದೆ ಮಡದಿ ಮಗು
ಸಕಲ ಸುಖದ ಸವಿ ಪರಿವಾರ
ಕಹಿಯೊ ಎಂಬವೊಲು ಕೊಡವಿಕೊಂಡು ನಡು-
ರಾತ್ರಿಯೊಳಡವಿಗೆ ನಡೆದೆ ಗುರು ||

ಆರುವರುಷದಲೆದಾಟವು ಘೋರ
ಕಡೆಗು ಗೆದ್ದೆ ನೀ ಜಿತಮಾರ
ಭೋಧಿವೃಕ್ಷದಡಿ ಪ್ರಜ್ಞಾಯುಧದಲಿ
ಮಾರಸೇನೆಯನು ಮುರಿದೆ ಗುರು ||

ಗೆದ್ದು ಬಂದು ನೀ ವಾರಾಣಾಸಿಯಲಿ
ಅಮೃತ ದುಂದುಭಿಯ ಬಾರಿಸಿದೆ
ಧರ್ಮಚಕ್ರವನು ಸ್ಥಾಪಿಸತೊಡಗಿದೆ
ಜಗಗಳ ಹಿತ ಸುಖವಾಗಿ ಗುರು ||

ದಯೆಯೆ ಮೂಲವೈ ಸರ್ವಧರ್ಮಕೂ
ಶೀಲವೆ ಜೀವನಕಡಿಪಾಯ
ಶೀಲವಿಲ್ಲದವಗಾಗದು ಪ್ರಜ್ಞೆ
ಜೋಕೆ ಜೋಕೆ ಎಂದೊರೆದೆ ಗುರು ||

ಹೊಸದು ಹೇಳಲಿಕೆ ಬಂದವನಲ್ಲ
ಹೊಸದು ಲೋಕದೊಳಗೇನುಂಟು
ಸತ್ಯಪುರಾತನ ಸತ್ಯವೆ ನೂತನ
ಸತ್ಯ ಚಿರಂತನ ಎಂದೆ ಗುರು ||