ಶರೀರವೆಂತೆಂಬುವ ಹೊಲವ

Category: ಶ್ರೀಗುರು

Author: ಸರ್ಪಭೂಷಣ ಶಿವಯೋಗಿ

ಶರೀರವೆಂತೆಂಬುವ ಹೊಲವ ಹಸನು ಮಾಡಿ
ಪರತತ್ತ್ವಬೆಳೆಯನೆ ಬೆಳೆದುಣ್ಣಿರೋ ||

ಶಮೆದಮೆಯೆಂದೆಂಬ ಎರಡೆತ್ತುಗಳ ಹೂಡಿ
ವಿಮಲಮಾನಸವ ನೇಗಿಲವನೆ ಮಾಡಿ
ಮಮಕಾರವೆಂದೆಂಬ ಕರಿಕೆಯ ಕಳೆದಿಟ್ಟು
ಸಮತೆಯೆಂದೆಂಬುವ ಗೊಬ್ಬರ ಚೆಲ್ಲಿ ||

ಗುರುವರನುಪದೇಶವೆಂಬ ಬೀಜವ ಬಿತ್ತಿ
ಮೆರೆವ ಸಂಸ್ಕಾರವೃಷ್ಟಿಯ ಬಲದಿ
ಅರಿವೆಂಬ ಪೈರನೆ ಬೆಳೆಸುತ ಮುಸುಗಿರ್ದ
ದುರಿತದುರ್ಗುಣವೆಂಬ ಕಳೆಯನು ಕಿತ್ತು ||

ಚಿರಮುಕ್ತಿಯೆಂದೆಂಬ ಧಾನ್ಯವ ಬೆಳೆದುಂಡು
ಪರಮಾನಂದದೊಳು ದಣ್ಣನೆ ದಣಿದು
ಗುರುಸಿದ್ದನಡಿಗಳಿಗೆರಗುತ್ತ ಭವವೆಂಬ
ಬರವನು ತಮ್ಮ ಸೀಮೆಗೆ ಕಳುಹಿ ||