ಬಾರೆಲೊ ಸ್ವಾಮಿ ಬಾರೈ ಪ್ರಭುವೆ

Category: ಶ್ರೀರಾಮಕೃಷ್ಣ

Author: ಸ್ವಾಮಿ ಶಾಸ್ತ್ರಾನಂದ

ಬಾರೆಲೊ ಸ್ವಾಮಿ ಬಾರೈ ಪ್ರಭುವೆ
ಬಾರೈ ಎನ್ನಯ ಶ್ರೀಗುರುದೇವನೆ ॥

ಮಾತಿಗೆ ಸಿಲುಕದ ಮನಸಿಗೂ ನಿಲುಕದ
ನೂತನ ರೀತಿಯ ಪರ ಅವತಾರೀ
ಕನಸಲು ಕಾಮವು ಸುಳಿಯದ ಮನವು
ಕನಕದ ಸೋಂಕನು ಸಹಿಸದ ತನುವು ॥

ನಿರತವು ಪರದೆಡೆ ಧಾವಿಸಿ ಏರುವ
ಶ್ರಮದಿಂ ಧರೆಯೆಡೆ ಇಳಿಯುವ ಮನವು
ಸರಸಕು ಸಟೆಯನು ನುಡಿಯದ ರಸನವು
ಪರಹಿತಕಾಗಿಯೆ ಧರಿಸಿದ ಜನುಮವು ॥

ಈ ಪರಿ ಮಹಿಮೆಯ ನಿನ್ನನು ಉಳಿದು
ಬೇರಾರೆನ್ನಯ ತಾರಕ ದೇವನು
ನಿನ್ನಯ ಒಲವು ದಯೆಗಳು ಇರಲು
ಅನ್ಯವದೇತಕೊ ಧನ್ಯನು ನಾನು ॥