ಶ್ರೀ ಪತಿಯು ನಮಗೆ

Category: ಶ್ರೀಕೃಷ್ಣ

Author: ಪುರಂದರದಾಸ

ಶ್ರೀಪತಿಯು ನಮಗೆ ಸಂಪದವೀಯಲಿ
ವಾಣೀಪತಿಯು ನಮಗೆ ದೀರ್ಘಾಯು ಕೊಡಲಿ ||

ವರವಿಬುಧರನು ಪೊರೆಯೆ ವಿಷವ ಕಂಠದಲಿಟ್ಟ
ಹರ ನಿತ್ಯ ನಮಗೆ ರಕ್ಷಣೆ ನೀಡಲಿ |
ನರರೊಳುನ್ನತವಾದ ನಿತ್ಯ ಭೋಗಂಗಳನು
ಪುರುಹೂತ ದಯದಿಂದ ಪೂರ್ಣಮಾಡಿಸಲಿ ||

ವಿನುತಸಿದ್ಧಿಪ್ರದನು ವಿಘ್ನೇಶ ದಯದಿಂದ
ನೆನೆದ ಕಾರ್ಯಗಳ ನೆರೆವೇರಿಸಲಿ ಹರಸಿ |
ದಿನದಿನವು ಧನ್ವಂತ್ರಿಯಾಪತ್ತುಗಳ ಕಳೆದು
ಮನಹರುಷವಿತ್ತು ಮನ್ನಿಸಲಿ ಬಿಡದೆ ||

ನಿರುತ ಸುಜ್ಞಾನವನು ಬೆಳಗಿ ಕೃಪೆಗೈಯುವ
ಗುರುಗಳಾಶೀರ್ವಾದ ನಮಗಾಗಲಿ |
ಪುರಂದರವಿಟ್ಠಲನ ಕರುಣದಿಂದಲಿ ಸಕಲ
ಸುರರೊಲುಮೆ ನಮಗೆ ಸುಸ್ಥಿರವಾಗಲಿ ||