ಉಬ್ಬದಿರು ಉಬ್ಬದಿರು
Category: ಶ್ರೀಕೃಷ್ಣ
Author: ಪುರಂದರದಾಸ
ಉಬ್ಬದಿರು ಉಬ್ಬದಿರು ಎಲೆ ಮಾನವ |
ಹೆಬ್ಬುಲಿಯಂತೆ ಯಮ ಬೊಬ್ಬಿಡುತ ಕಾದಿರುವ ||
ಸಾಗರದ ತೆರೆಯಂತೆ ಸಾವು ಹುಟ್ಟಿರಲಾಗಿ
ಭೋಗಭಾಗ್ಯಗಳೆಂದು ಬಳಲಲೇಕೋ |
ನಾಗಹೆಡೆ ನೆರಳಲ್ಲಿ ನಡುಗೋ ಕಪ್ಪೆಯ ತೆರದಿ
ಕೂಗಿ ಚೀರಿದರೆ ನಿನ್ನಾಗ ಕೇಳುವರೆ ||
ಮಾಳಿಗೆ ಮನೆಯೆಂದು ಮತ್ತೆ ಸತಿಸುತರೆಂದು
ಜಾಳಿಗೆ ಧನಧಾನ್ಯ ಪಶುಗಳೆಂದು |
ವೇಳೆ ತಪ್ಪದೆ ತಿಂಬ ಕೂಳು ತನಗುಂಟೆಂದು
ಗಾಳಿಗೊಡ್ಡಿದ ದೀಪ ಬದುಕು ಬಯಲು ||
ಅಸ್ಥಿರದ ಭವದೊಳಗೆ ಅತಿಶಯಗಳಣಿಸದಲೆ
ವಸ್ತು ಇದರಲ್ಲಿ ಕೇಳು ವೈರಾಗ್ಯವ |
ವಿಸ್ತಾರ ಮಹಿಮ ಶ್ರೀ ಪುರಂದರವಿಟ್ಠಲನ
ಸ್ವಸ್ಥಚಿತ್ತದಿ ನೆನೆದು ಮುಕ್ತಿ ಪಡೆ ಮನುಜ ||