ಪೋಗದಿರಲೊ ರಂಗ ಬಾಗಿಲಿಂದಾಚೆಗೆ
Category: ಶ್ರೀಕೃಷ್ಣ
Author: ಪುರಂದರದಾಸ
ಪೋಗದಿರಲೊ ರಂಗ ಬಾಗಿಲಿಂದಾಚೆಗೆ
ಭಾಗವತರು ಕಂಡರೆತ್ತಿ ಕೊಂಡೊಯ್ವರೋ ॥
ಸುರಮುನಿಗಳು ತಮ್ಮ ಹೃದಯ ಗಹ್ವರದಲ್ಲಿ
ಪರಮಾತ್ಮನ ಕಾಣದೆ ಅರಸುವರೋ
ದೊರಕದ ವಸ್ತುವಿಂದು ದೊರಕಿತು ತಮಗೆಂದು
ಹರುಷದಿಂದಲಿ ನಿನ್ನ ಕರೆದೆತ್ತಿಕೊಂಬರೋ ॥
ಅಗಣಿತ ಗುಣ ನಿನ್ನ ಜಗದ ನಾರಿಯರೆಲ್ಲ
ಹಗೆಯಾಗಿ ನುಡಿವರೋ ಗೋಪಾಲನೇ
ಮಗುಗಳ ಮಾಣಿಕ್ಯ ತಗುಲಿತು ಕರಕೆಂದು
ಬೇಗದಿಂದಲಿ ಬಂದು ಬಿಗಿದಪ್ಪಿಕೊಂಬರೋ ॥
ದಿಟ್ಟ ನಾರಿಯರೆಲ್ಲ ಇಷ್ಟವ ಸಲಿಸೆಂದು
ಅಟ್ಟಟ್ಟಿ ಬೆನ್ನಿಂದೆ ತಿರುಗುವರೋ
ಸೃಷ್ಟೀಶ ಪುರಂದರ ವಿಟ್ಕಲರಾಯನೆ
ಇಷ್ಟಿಷ್ಟು ಬೆಣ್ಣೆಯ ಕೊಟ್ಟೆನೋ ರಂಗಯ್ಯಾ॥