ಮನವೆನ್ನ ಮಾತು ಕೇಳದು ಮಂದಜ್ಞಾನದಿ

Category: ಶ್ರೀಕೃಷ್ಣ

Author: ಪುರಂದರದಾಸ

ಮನವೆನ್ನ ಮಾತು ಕೇಳದು ಮಂದಜ್ಞಾನದಿ
ತನುವಿನಾಸೆಯು ಬಿಡಲೊಲ್ಲದು ॥

ದೇಹ ಸಂಬಂಧಿಗಳಾದವರೈವರು
ಮೋಹಪಾಶದಿ ಕಟ್ಟಿ ಬಿಗಿದಿಹರೈ
ದೇಹವನಿತ್ಯವೆಂಬುವ ಗುರುತರಿಯದೆ
ಮಾಯಾ ಪ್ರಪಂಚವು ಬದ್ಧವಾಗಿದೆ ॥

ಸಾಧುಸಜ್ಜನರ ಸಂಗವ ಮಾಡಿ ಪರಗತಿಗೆ
ಆಧಾರವನು ಮಾಡಲೊಲ್ಲದಯ್ಕಾ
ಕ್ರೋಧ ಕುಹಕ ದುಷ್ಪರೊಡನಾಡಿ ಕಾಲನ
ಬಾಧೆಗೆ ಗುರಿಯ ಮಾಡುತಲಿದೆ ಹರಿಯೆ ॥

ಮದಗಜ ಮೈಯ ಮರೆತು ಮುಂದುಗಾಣದೆ
ಕದುವಿನೊಳಗೆ ಬಿದ್ದಂತಾಯಿತಯ್ಯ್ಕಾ
ಹೃದಯ ಕಮಲದಲ್ಲಿ ನಿಂತು ರಕ್ಷಿಸೋ ಎನ್ನ
ಪದುಮಾಕ್ಷ ವರದ ಶ್ರೀ ಪುರಂದರವಿಟ್ಕಲ ||