ಮಾನವ ಜನ್ಮ ದೊಡ್ಡದು
Category: ವೈರಾಗ್ಯ
Author: ಪುರಂದರದಾಸ
ಮಾನವ ಜನ್ಮ ದೊಡ್ಡದು ಇದ
ಹಾನಿ ಮಾಡಲಿ ಬೇಡಿ ಹುಚ್ಚಪ್ಪಗಳಿರಾ ॥
ಕಣ್ಣು ಕೈ ಕಾಲ್ಕಿವಿ ನಾಲಿಗೆ ಇರಲಿಕ್ಕೆ
ಮಣ್ಣು ಮುಕ್ಕಿ ಮರುಳಾಗುವರೆ
ಹೆಣ್ಣು ಮಣ್ಣಿಗಾಗಿ ಹರಿನಾಮಾಮೃತ
ಉಣ್ಣದೆ ಉಪವಾಸ ಇರುವರೆ ಖೋಡಿ ॥
ಕಾಲನ ದೂತರು ಕಾಲ್ಚಿಡಿದೆಳೆವಾಗ
ತಾಳು ತಾಳೆಂದರೆ ತಾಳುವರೆ
ಧಾಳಿ ಬಾರದ ಮುನ್ನ ಧರ್ಮವ ಗಳಿಸಿರೋ
ಸುಳ್ಳಿನ ಸಂಸಾರ ಸುಳಿಗೆ ಸಿಕ್ಕಲು ಬೇಡಿ ॥
ಏನು ಕಾರಣ ಯದುಪತಿಯನು ಮರೆತಿರಿ
ಧನ ಧಾನ್ಯ ಪುತ್ರರು ಕಾಯುವರೆ
ಇನ್ನಾದರೂ ಏಕಭಾವದಿ ಭಜಿಸಿರೋ
ಚನ್ನ ಶ್ರೀ ಪುರಂದರ ವಿಟ್ಟಲರಾಯನ ॥