ಸಂಸಾರವೆಂಬಂಥ ಸೌಭಾಗ್ಯವಿರಲಿ

Category: ಶ್ರೀಕೃಷ್ಣ

Author: ಪುರಂದರದಾಸ

ಸಂಸಾರವೆಂಬಂಥ ಸೌಭಾಗ್ಯವಿರಲಿ
ಕಂಸಾರಿ ನೆನೆವೆಂಬ ಸೌಭಾಗ್ಯವಿರಲಿ ॥|

ತಂದೆ ನೀನೇ ಕೃಷ್ಣ ತಾಯಿ ಇಂದಿರೆ ದೇವಿ
ಪೊಂದಿದ ಅಣ್ಣನು ವನಜ ಸಂಭವನು
ಇಂದುಮುಖಿ ಸರಸ್ವತಿ ದೇವಿಯೆ ಅತ್ತಿಗೆಯು
ಎಂದೆಂದಿಗೂ ವಾಯುದೇವರೆ ಗುರುವು ॥

ಭಾರತೀದೇವಿಯೆ ಗುರುಪತ್ನಿ ಎನಗೆ
ಗರುಡ ಶೇಷಾದಿಗಳೆ ಗುರುಪುತ್ರರು
ಹರಿದಾಸರೆಂಬುವರು ಇಷ್ಟಬಾಂಧವರೆನಗೆ
ಹರಿಭಜನೆ ನಡೆಯುತಿಹ ಸ್ಥಳವೆ ಮಂದಿರವು ॥

ಸರ್ವಾಭಿಮಾನವನು ತ್ಯಜಿಸುವುದೇ ಸುಜ್ಞಾನ
ಹರಿಯ ನಾಮವೇ ಇನ್ನೂ ಅಮೃತಪಾನ
ವರಪುರಂದರ ವಿಟ್ಠಲ ನಿನ್ನ ಪಾದಧ್ಕಾನ
ಕರುಣಿಸಿ ಅನವರತ ಕರಪಿಡಿದು ಕಾಯೋ ॥