ನಿನ್ನ ನೋಡಿ ಧನ್ಯನಾದೆನೊ ಹೇ ಶ್ರೀನಿವಾಸ
Category: ಶ್ರೀಕೃಷ್ಣ
Author: ಪುರಂದರದಾಸ
ನಿನ್ನ ನೋಡಿ ಧನ್ಯನಾದೆನೊ
ಹೇ ಶ್ರೀನಿವಾಸ ॥
ಪಕ್ಷಿವಾಹನ ಲಕ್ಷ್ಮೀರಮಣ
ಲಕ್ಷ್ಯವಿಟ್ಟು ನೋಡೋ ಪಾಂಡು-
ಪಕ್ಷ ಸರ್ವದೈತ್ಯಶಿಕ್ಷ
ರಕ್ಷಿಸೆನ್ನ ಕಮಲಾಕ್ಷ ॥
ದೇಶ ದೇಶ ತಿರುಗಿ ನಾನು
ಆಸೆಬದ್ಧನಾದೆ ಸ್ವಾಮಿ
ದಾಸನು ನಾನಲ್ಲವೆ ಜಗ-
ದೀಶ ಶ್ರೀಶ ಶ್ರೀನಿವಾಸ ॥
ಕಂತುಜನಕ ಕೇಳೊ ಎನ್ನ
ಅಂತರಂಗದಾಸೆಯನ್ನು
ಅಂತರವಿಲ್ಲದೆ ಪಾಲಿಸು ಶ್ರೀ-
ಕಾಂತ ಪುರಂದರ ವಿಠ್ಠಲ ॥