ಸಕಲಭಯ ತಲ್ಲಣವ

Category: ಶ್ರೀಕೃಷ್ಣ

Author: ವಚನವೇದ

ಸಕಲಭಯ ತಲ್ಲಣವ ಪರಿಹರಿಪ ಮಹಿಮನನು
ಒಮ್ಮೆಯಾದರು ಏಕೆ ಕರೆಯದಿರುವೆ |
ಭವಘೋರಭ್ರಮೆಯಲ್ಲಿ ನಿನ್ನ ನೀನೇ ಮರೆತೆ
ಏನೀ ವಿಡಂಬನೆಯು ನಿನಗೆ ತರವೇ ||

ಜನಧನದ ಸಂಗದಲಿ ಅವನ ಮರೆಯದ ತೆರದಿ
ಎಚ್ಚರಿರು ಭ್ರಮೆಯನ್ನು ಅತ್ತ ದೂಡು |
ನಿಜವನಾರಾಧಿಸಲು ಸರ್ವಪಾಪವಿಮುಕ್ತ
ನನ್ನ ಮಾತಿನ ನಿಜವನಳೆದು ನೋಡು ||

ಭವಜಲಧಿಯನು ದಾಟಿ ನಡೆವ ಮನವಿರೆ ನಿನಗೆ
ಅಳಿಯಾಸೆಗಳ ತೊರೆದು ಹರಿಯ ನುತಿಸು |
ದೇಹಮನಪ್ರಾಣಗಳ ಅವನಿಗರ್ಪಿತ ಮಾಡಿ
ಪ್ರೇಮದಾರಾಧನೆಗೆ ಮನವ ಸಲಿಸು ||