ಯಾರಿದ್ದರೇನಯ್ಯ ನೀನಲ್ಲದೆನಗಿಲ್ಲ

Category: ಶ್ರೀಕೃಷ್ಣ

Author: ಪುರಂದರದಾಸ

ಯಾರಿದ್ದರೇನಯ್ಯ ನೀನಲ್ಲದೆನಗಿಲ್ಲ '
ಕಾರುಣ್ಯನಿಧಿ ಹರಿಯೇ ಕೈಯ ಬಿಡಬೇಡ ॥

ದುರುಳಕೌರವನಂದು ದ್ರುಪದಜೆಯ ಸೀರೆಯನು
ಕರದಿಂದ ಸೆಳೆಯುತಿರೆ ಪತಿಗಳೆಲ್ಲ
ಗರಹೊಯ್ದಂತಿರ್ದರಲ್ಲದೆ ನರಹರಿಯೆ
ಕರುಣದಿಂ ನೀನಲ್ಲದಿನ್ಕಾರು ಕಾಯ್ದವರು ॥

ಅಂದು ನೆಗಳಿನ ಬಾಧೆಯಿಂದ ಗಜರಾಜನನು
ತಂದೆ ನೀ ವೈಕುಂಠದಿಂದ ಬಂದು
ಇಂದಿರೀಶನೆ ಚಕ್ರದಿಂದ ನೆಗಳಿನ ಬಾಯ
ಸಂದಿಯನು ಸೀಳಿ ಪೊರೆದೆಯಲ್ಲೋ ಹರಿಯೆ ॥

ಅಜಮಿಳನು ಕುಲಗೆಟ್ಟು ಕಾಲದೂತರು ಬರಲು
ನಿಜಸುತನ ಕರೆಯೆ ನೀನತಿವೇಗದಿ
ತ್ರಿಜಗದೊಡೆಯನೆ ಪುರಂದರವಿಟ್ಠಲ ಕರುಣದಲಿ
ನಿಜದೂತರ ಕಳುಹಿ ಕಾಯ್ದೆ ಗಡ ಹರಿಯೆ ॥