ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ

Category: ಶ್ರೀಕೃಷ್ಣ

Author: ಕನಕದಾಸ

ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ
ಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೇ ॥

ಪರಮಪದದೊಳಗೆ ವಿಷಧರನ ತಲ್ಪದಲಿ ನೀ
ಸಿರಿ ಸಹಿತ ಕ್ಲೀರವಾರಿಧಿಯೊಳಿರಲು
ಕರಿರಾಜ ಕಷ್ಟದಲಿ ಆದಿಮೂಲ ಎಂದು
ಕರೆಯಲಾಕ್ಷಣ ಬಂದು ಒದಗಿದೆಯೊ ನರಹರಿಯೇ ॥

ಕಡುಕೋಪದಿಂ ಖಳನು ಖಡ್ಗವನೆ ಪಿಡಿದು ನಿ
ನ್ನೊಡೆಯನೆಲ್ಲಿಹನೆಂದು ನುಡಿಯೆ
ದೃಢಭಕುತಿಯಲಿ ಶಿಶುವು ಬಿಡನೆ ನಿನ್ನನು ಭಜಿಸೆ
ಸಡಗರದಿ ಸ್ತಂಭದಿಂದೊಡೆದೆ ನರಹರಿಯೇ ॥

ಯಮಸುತನ ರಾಣಿಗಕ್ಷಯವಸನವನಿತ್ತೆ
ಸಮಯದಲಿ ಅಜಮಿಳನ ಪೊರೆದೆ
ಸಮಯಾಸಮಯವುಂಟೆ ಭಕ್ತವತ್ಸಲ ನಿನಗೆ
ಕಮಲಾಕ್ಷ ಕಾಗಿನೆಲೆಯಾದಿ ಕೇಶವನೇ ॥