ಶಿವನು ತಬ್ಬಲಿ ಪರದೇಸಿಯಂತೆ ತಂಗಿ

Category: ಶ್ರೀಶಿವ

Author: ಚಿ. ಸದಾಶಿವಯ್ಯ

ಮೇಘ

ಶಿವನು ತಬ್ಬಲಿ ಪರದೇಸಿಯಂತೆ ತಂಗಿ
ಅವಗೆ ಮನೆ ಮಠ ಇಲ್ಲವಂತೆ ತಂಗಿ ॥
ತಂದೆ ತಾಯಿಗಳಿಲ್ಲ ಬಂಧು ಬಳಗ ಇಲ್ಲ
ಕಂದ ನೀನೆಲ್ಲೆಂದು ಕೇಳ್ವರಿಲ್ಲ ತಂಗಿ ॥

ಜೋಗಿಯಾ

ಹರಕು ಚಿಂದಿಯ ಬಟ್ಟೆ ಮುರುಕು ಮಣ್ಣಿನ ತಟ್ಟೆ
ತಿರಿದು ತಿನ್ನುವ ತಾ ಹಸಿದ ಹೊಟ್ಟೆ
ಮಳೆ ಗಾಳಿ ಧಗೆ ಬೆಂಕಿ ಛಳಿ ಮಂಜು ಕೊರೆತದಿ
ಬಳಲುವ ಕಂದನ ಕರೆವರಿಲ್ಲ ತಂಗಿ ॥

ಶಿವರಂಜಿನೀ

ಬೂದಿ ಹಾಸಿಗೆಯಾಯ್ತು ಹಾದಿ ಮಸಣವಾಯ್ತು
ಬೀದಿ ಭಿಕಾರಿಯಂತಲೆದಾಯ್ತು
ಸುತ್ತ ಸಾನದಿ ಹತ್ತಿದ ಚಿತೆ ಉರಿ
ಅತ್ತ ಕಂದನ ಎತ್ತಿಕೊಂಬರಿಲ್ಲ ತಂಗಿ ॥

ಮೇಘ

ಶಿವನು ತಬ್ಬಲಿ ಪರದೇಸಿಯಂತೆ ತಂಗಿ
ಅವಗೆ ಮನೆ ಮಠ ಇಲ್ಲವಂತೆ ತಂಗಿ ;
ಭೂತ ಬಳಗಗಳು ಪ್ರೇತ ಮರುಳುಗಳು
ಭೀತಿ ಪಡಿಸಿ ಸುತ್ತ ಕುಣಿವವಲ್ಲೆ ತಂಗಿ ॥