ಎಲ್ಲಾ ರೂಪವು ತಾನಂತೆ ಶಿವ

Category: ಶ್ರೀಶಿವ

Author: ಶಿವರಾಮಶಾಸ್ತ್ರೀ

ಎಲ್ಲಾ ರೂಪವು ತಾನಂತೆ ಶಿವ-
ನೆಲ್ಲೆಲ್ಲಿಯು ತಾನಿಹನಂತೆ
ಅಲ್ಲಲ್ಲರಸುತ ಗುಡಿಗಳ ತಿರುಗುವ
ಕಳ್ಳರ ಕಣ್ಣಿಗೆ ಮಣ್ಣಂತೆ ॥

ಕಣ್ಣೆಂಬುದು ತನಗಿಲ್ಲಂತೆ
ಕಣ್ಣಿಗೆ ಕಣ್ಣಾಗಿಹನಂತೆ
ಕಣ್ಣು ಬಿಟ್ಟು ತನ್ನರಸುವ ಜನರಿಗೆ
ಬಣ್ಣ-ಬಣ್ಣವಾಗಿಹನಂತೆ ||

ದೃಶ್ಯವಿದಾದವ ತಾನಂತೆ
ದೃಶ್ಯವನರಿವನು ತಾನಂತೆ
ದೃಶ್ಯಾದೃಕ್ಕಿನೊಳೆರಡರ ನಡುವೆ
ಶಾಶ್ವತನಾದವ ತಾನಂತೆ ॥

ಕಳೆದುಳಿಯುವುದೇ ತಾನಂತೆ
ಉಳಿಯುವ ಕಳೆಯುವರಿಲ್ಲಂತೆ
ಕುಲಶೀಲಗಳೆಂಬ ಕೊಳೆಯಿಲ್ಲದೆ ನಿರ್‌-
ಮಲದೊಳಗಿರುವನು ತಾನಂತೆ ॥