ಮರೆಯದಿರು ಮರೆಯದಿರು ಎಲೆ ಮಾನವ- ನಿನ್ನ
Category: ಇತರೆ
Author: ಕನಕದಾಸ
ಮರೆಯದಿರು ಮರೆಯದಿರು ಎಲೆ ಮಾನವ- ನಿನ್ನ
ಸಿರಿಯ ಹವಣೇನು ಹೇಳೆಲೊ ಮಂಕು ಜೀವ ||ಪ||
ಸಿರಿಯೊಳಗೆ ಮಾಧವನೊ ಹಿರಿಯರೊಳು ಬ್ರಹ್ಮನೋ
ದುರುಳ ರಾವಣನ ಸಂಪದವೊ ನಿನಗೆ
ದುರಿಯೋಧನನಂತೆ ಮಕುಟವರ್ಧನನೊ- ನಿನ್ನ
ಸಿರಿಯ ಹವಣೇನು ಪೇಳೆಲೊ ಮಾನವ ||1||
ಬಲುಹಿನಲಿ ವಾಲಿಯೋ ಚೆಲುವಿಕೆಗೆ ಕಾಮನೋ
ಸಲುಗೆಯಲಿ ನಾರದನೊ ಹೇಳು ನೀನು
ಕಲಿಗಳೊಳು ಭೀಷ್ಮ ದ್ರೋಣಾಚಾರ್ಯ ಫಲಗುಣನೊ
ಕುಲದಲ್ಲಿ ವಸಿಷ್ಠನೊ ಹೇಳೆಲೊ ಮಾನವ ||2||
ತ್ಯಾಗದಲಿ ಕರ್ಣನೋ ಭೋಗದಲಿ ಸುರಪನೋ
ಭಾಗ್ಯದಲಿ ದಶರಥನೊ ಹೇಳು ನೀನು
ರಾಗದಲಿ ತುಂಬುರನೊ ಯೋಗದಲಿ ಸನಕನೊ
ಹೀಗ್ಯಾರ ಹೋಲುವೆ ಹೇಳೆಲೊ ಮಾನವ ||3||
ಯತಿಗಳಲ್ಲಗಸ್ತ್ಯನೋ ಜೊತೆಯಲ್ಲಿ ಹನುಮನೋ
ವ್ರತಕೆ ಶುಕಮುನಿಯೇನೊ ಹೇಳು ನೀನು
ಶ್ರುತಿಪಾಠ ವಿಬುಧರೊಳು ಸೂತನೋ- ನಿನ್ನ ಶುಭ
ಮತಿಯ ಹವಣೇನು ಹೇಳೆಲೊ ಮಾನವ ||4||
ವಿದ್ಯೆಯಲಿ ಸುರಗುರುವೊ ಬುದ್ಧಿಯಲಿ ಮನುಮುನಿಯೊ
ಶ್ರದ್ಧೆಯಲಿ ನೀನಾರ ಹೋಲ್ವೆ ಹೇಳು
ಸಿದ್ಧರೊಳು ನವಕೋಟಿಯೊಳೊಬ್ಬನೊ ನೀನು
ಕ್ಷುದ್ರ ಮಾನವ ನಿನ್ನ ಸಿರಿಯ ಹವಣೇನು ||5||
ಗೆಲ್ಲು ಸೋಲಿನ ಮಾತು ಸಲ್ಲದೆಲವೋ ನಿನಗೆ
ಎಲ್ಲವನು ಬಿಡು ಗರ್ವ ನಿನಗೇತಕೊ
ಬಲ್ಲೆಯಾದರೆ ಆದಿ ಕೇಶವನ ನಾಮವನು
ಸೊಲ್ಲು ಸೊಲ್ಲಿಗೆ ತುತಿಸಿ ಸುಖಿಯಾಗಿ ಬಾಳು ||6||