ರಂಗನೆಂಥವನೆಂಥವನೆಲೆ ತಂಗಿ

Category: ಶ್ರೀಕೃಷ್ಣ

ರಂಗನೆಂಥವನೆಂಥವನೆಲೆ ತಂಗಿ
ರಂಗನಂತರಂಗ ಹಲವಂಗ ತಿಳಿಯದು ಬ್ರಹ್ಮಾದಿಗಳಿಗೆ ||ಪ||

ಆಗಮವ ತಂದಿಹನೆ- ರಂಗ
ಬೇಗದಿ ಗಿರಿಯ ಪೊತ್ತಿಹನೆ
ಮೂಗಿಂದ ಭೂಮಿಯನೆತ್ತಿದನೆ- ಕಂದ
ಕೂಗಲು ಕಂಬದಿ ಬಂದ ಕಾಣಕ್ಕ ||1||

ಧರೆಯ ಈರಡಿ ಮಾಡಿದನೆ- ಭೂ
ಸುರರಿಗೆ ದಾನವ ನೀಡಿದನೆ
ನೆರೆದ ಕಪಿ ಹಿಂಡು ಕೂಡಿದನೆ- ಫಣಿ
ಶಿರದಲಿ ಕುಣಿಕುಣಿದಾಡಿದನಕ್ಕ ||2||

ಉಟ್ಟದ್ದು ಬಿಟ್ಟು ತಾ ನಿಂತಿಹನೆ- ರಂಗ
ದಿಟ್ಟಾದ ಕುದುರೆಯನೇರಿದನೆ
ದುಷ್ಟರನೆಲ್ಲ ಅಳಿದಿಹನೆ- ನಮ್ಮ
ಬಿಟ್ಟಾದಿಕೇಶವರಾಯ ಕಾಣಕ್ಕ ||3||