ಆರಿಗಾದರು ಪೂರ್ವಕರ್ಮ ಬಿಡದು
Category: ಇತರೆ
Author: ಕನಕದಾಸ
ಆರಿಗಾದರು ಪೂರ್ವಕರ್ಮ ಬಿಡದು
ವಾರಿಜೋದ್ಭವ ಅಜಭವಾದಿಗಳ ಕಾಡುತಿಹುದು ||ಪ||
ವೀರಭೈರವನಂತೆ ತಾನು ಬತ್ತಲೆಯಂತೆ
ಮಾರಿ ಮಸಣಿಗಳಂತೆ ತಿರಿದು ತಿಂಬರಂತೆ
ಸೂರ್ಯ ಚಂದ್ರಮರಂತೆ ರಾಹುವಟ್ಟುಳಿಯಂತೆ
ಮೂರೆರಡು ತಲೆ ಹರಗೆ ಕೈಲಿ ಕಪ್ಪರವಂತೆ ||1||
ಶಿಷ್ಟ ಹರಿಶ್ಚಂದ್ರನಿಗೆ ಮಸಣದಡಿಗೆಯಂತೆ
ಸೃಷ್ಟಿಸುವ ಬೊಮ್ಮನಿಗೆ ಶಿರ ಹೋಯಿತಂತೆ
ಅಷ್ಟದಿಕ್ಪಾಲಕರು ಸೆರೆಯಾಗಿರುವರಂತೆ
ಕಟ್ಟುಗ್ರದಿಂದ್ರನಿಗೆ ಮೈಯೆಲ್ಲ ಕಣ್ಣಂತೆ ||2||
ಹನ್ನೊಂದಕ್ಷೋಹಿಣಿ ಬಲವುಳ್ಳ ಕೌರವನು
ರಣದೊಳಗೆ ತೊಡೆಮುರಿದು ಬಿದ್ದನಂತೆ
ವನಜಾಕ್ಷ ಸಿರಿಯರಸ ಬಲಿಯ ಬೇಡಿದನಂತೆ
ವನಿತೆ ಧರ್ಮಜನ ತಾಯ್ತಿರಿದುಂಡಳಂತೆ ||3||
ಧರೆಗೆ ಧರ್ಮಜನಂತೆ ಕಂಕಭಟ್ಟನಂತೆ
ಶೂರ ಭೀಮನು ಬಾಣಸಿಗನಾದನಂತೆ
ವೀರ ಫಲಗುಣನಂತೆ ಕೈಯೊಳಗೆ ಬಳೆಯಂತೆ
ಕಿರಿಯ ನಕುಲ ಸಹದೇವರು ತುರುಗಾಯ್ದರಂತೆ ||4||
ಹರನ ವಾಹನವಂತೆ ಹುಲ್ಲು ತಿಂಬುವುದಂತೆ
ವಿರಂಚಿ ವಾಹನವಂತೆ ಕಮಲ ಭಕ್ಷಿಪನಂತೆ
ಹರಿಯ ಹೊತ್ತಿಹನಂತೆ ಹಾವು ಭಕ್ಷಿಪನಂತೆ
ಸಿರಿಯಾದಿಕೇಶವನು ತಾ ಬೆಣ್ಣೆಗಳ್ಳನಂತೆ ||5||