ಏಳು ನಾರಾಯಣ ಏಳು ಲಕ್ಷ್ಮೀರಮಣ

Category: ಶ್ರೀಕೃಷ್ಣ

Author: ಕನಕದಾಸ

ಏಳು ನಾರಾಯಣ ಏಳು ಲಕ್ಷ್ಮೀರಮಣ
ಏಳು ಶ್ರೀಗಿರಿಯೊಡೆಯ ವೆಂಕಟೇಶ
ಏಳಯ್ಯ ಬೆಳಗಾಯಿತು ||ಪ||

ಕಾಸಿದ್ದ ಹಾಲುಗಳ ಕಾವಡಿಯಲಿ ತುಂಬಿ
ಲೇಸಾಗೆ ಹಾಲ್ಮೊಸರು ಬೆಣ್ಣೆಯಾ ಕಡೆದು
ಶೇಷಶಯನನೆ ಏಳು ಸಮುದ್ರ ಮಥನವ ಮಾಡು
ದೇಶ ಕೆಂಪಾಯಿತು ಏಳಯ್ಯ ಹರಿಯೆ ||1||

ಅರಳುಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳ
ಸುರರು ಸುಜನರೆಲ್ಲ ತಂದಿಹರು
ಅರವಿಂದ ಲೋಚನ ಮದನ ಗೋಪಾಲ ಕೃಷ್ಣ
ನೆರೆ ಕೋಳಿ ಕೂಗಿತು ಏಳಯ್ಯ ಹರಿಯೆ ||2||

ದಾಸರೆಲ್ಲರು ಬಂದು ದೂಳಿದರ್ಶನಗೊಂಡು
ಲೇಸಾಗಿ ತಾಳದಂಡಿಗೆ ಪಿಡಿದು
ಶ್ರೀಶಾದಿಕೇಶವನೆ ನಿನ್ನ ನಾಮವ ಸ್ಮರಿಸಿ
ಏಸೊಂದು ಸ್ತೋತ್ರವಗೈಯುತಿಹರೇಳಯ್ಯ ||3||