ಗಜೇಂದ್ರ ಮೋಕ್ಷ
Category: ಶ್ರೀಕೃಷ್ಣ
Author: ಕನಕದಾಸ
ಶ್ರೀನಾಥ ಪಾರ್ವತೀ ನಾಥ ಶರಣೆಂಬೆ ||ಪ||
ವಾಣಿ ಸರಸ್ವತಿಯ ಭಾರತಿಯ ಬಲಗೊಂಬೆ ||ಅ||
ನಾನು ಬಲ್ಲಷ್ಟು ಪೇಳುವೆನು ಈ ಕಥೆಯ
ಶ್ರೀನಾಥ ಗಜರಾಜಗೊಲಿದ ಸದ್ಗತಿಯ ||1||
ಚಪ್ಪನ್ನ ದೇಶದೊಳಗೆ ಉತ್ತಮವಾಗಿ
ಇಪ್ಪ ಗೌಳಿ ದೇಶದ ರಾಜ ಇಂದ್ರದ್ಯುಮ್ನ ||2||
ವೈರಾಗ್ಯ ಮೂಡಿ ಭೂಸುರರ ಸೇವಿಸುತ
ನಾರಾಯಣನ ಮನದಿ ನೆನೆದು ಮೈಮರೆತ ||3||
ಪುತ್ರ ಮಿತ್ರಾದಿ ಬಂಧುಗಳ ವರ್ಜಿಸಿದ
ನಿತ್ಯ ನರಹರಿಯ ಎಡೆಬಿಡದೆ ಚಿಂತಿಸಿದ ||4||
ಆನೆ ಕುದುರೆ ರಾಜ್ಯಗಳನೆ ವರ್ಜಿಸಿದ
ತಾನೆ ನದಿಗಿಳಿದು ಸ್ನಾನಾದಿಗಳ ಮಾಡಿ ||5||
ಸಂಧ್ಯಾವಂದನೆಗೈದು ಪದ್ಮಾಸನ ಹಾಕಿ
ಚಂದಾಗಿ ಧರಿಸಿದ ದ್ವಾದಶ ನಾಮಗಳ ||6||
ಇಂದಿರಾ ಪತಿಯ ಧ್ಯಾನದಿ ಅವನಿರುವಾಗ
ಬಂದನಾ ಎಡೆಗೆ ಅಗಸ್ತ್ಯಮುನಿವರೇಣ್ಯ ||7||
ಎದ್ದು ತನಗೆ ವಂದಿಸಲಿಲ್ಲವೆಂದೆನುತ
ಕುದ್ದು ಕುಂಜರನಾಗೆಂದು ಶಾಪವಿತ್ತ ||8||
ನಂದು ತಪ್ಪುಂಟು ಮಹರ್ಷಿಯೆ ಕಾಪಾಡು
ಮುಂದೆನಗೆ ವಿಶ್ಶಾಪವೆಂದು ಹೇಳೆನಲು ||9||
ವಿಷ್ಣು ಚಕ್ರವು ಬಂದು ನಿಮ್ಮ ಸೋಕಿದರೆ
ಆಕ್ಷಣ ವಿಶ್ಶಾಪವೆಂದು ಮುನಿ ನುಡಿದ ||10||
ಜ್ಞಾನವಡಗಿ ಅಜ್ಞಾನ ವೆಗ್ಗಳಿಸಿತು
ದಿನಪ ಮುಳುಗಿ ಕತ್ತಲೆ ಆವರಿಸಿದಂತೆ ||11||
ಧ್ಯಾನಿಸುತ ಹಿಂದು ಮುಂದಾಗಿ ನಿಂದಿರಲು
ಆನೆಯಾದನು ನೃಪನು ಆಕ್ಷಣದಿ ತಾನು ||12||
ಮೇಲುಗಿರಿ ಪರ್ವತವೆ ಕದಲಿ ಬಂದಂತೆ
ಮೇಲುಮದ ಕೀಳುಮದದಿಂದ ಘೀಳಿಟ್ಟು ||13||
ಹೆಣ್ಣಾನೆಗಳ ಕೂಡಿ ಸಂತತಿಯ ಪಡೆದು
ಹಣ್ಗೊನೆಗಳ ಮೆದ್ದು ತಣ್ಣನೆಯ ನೀರ್ಕುಡಿದು ||14||
ಕಂಡಕಂಡಲ್ಲಿ ಓಡುತಲಿ ಇಳಿಯುತಲಿ
ತುಂಡು ತುಂಡಾಗಿ ಮರಗಳನೆ ಮುರಿಮುರಿದು ||15||
ಹಿಂಡು ಹಿಂಡಾಗಿದ್ದ ಸತಿ ಸುತರ ಕೂಡಿ
ದಂಡು ದಾಳಿಯನಿಟ್ಟ ತೆರದಿ ಅಂಡಲೆಯೆ ||16||
ಬೆಂಡಾಗಿ ಬಾಯಾರಿ ಸುತ್ತಲೂ ನೋಡಿ
ಹೊಂಡ ಕಂಡತ್ತ ಧಾವಿಸಿತು ಸಕುಟುಂಬಿ ||17||
ಸುತ್ತಮುತ್ತ ಅಶ್ವತ್ಥ ಹೇರಳೆ ಕಿತ್ತಳೆ
ಒತ್ತಾಗಿ ದಾಳಿಂಬ ದ್ರಾಕ್ಷಿ ಖರ್ಜೂರ ||18||
ಬಾಗಿ ತೂಗುತ್ತ ಫಲವಾದ ಫಲವೆಲ್ಲ
ತೂಗಿ ಕರೆಯುತ್ತ ಮೇಲಾದ ಹೂವೆಲ್ಲ ||19||
ಉಲಿವ ಗಿಳಿ ಹಿಂಡುಗಳು ಕುಣಿವ ನವಿಲುಗಳು
ನಲವಿಂದ ಸರಗೈವ ಕೋಗಿಲೆಯ ದಂಡು ||20||
ದಂಡೆಯೊಳು ಒಳಗೊಂಡ ತಾವರೆಯ ಕೊಳಕೆ
ಶುಂಡಾಲವಿಳಿದು ನೀರೋಕುಳಿಯನಾಡಿ ||21||
ಸೊಂಡಿಲಿಂದಪ್ಪಳಿಸುತ ತೊತ್ತಳ ತುಳಿದು
ಹೊಂಡವನು ಕಲಕಿ ರಣಾಂಗಣಗೈದಾಗ ||22||
ಆ ಮಡುವಿನಲ್ಲಿದ್ದ ಶಾಪಗ್ರಸ್ತವಹ
ಮಾಮೊಸಳೆಯೊಂದು ಹಿಡಿಯಿತಾನೆಯ ಕಾಲ ||23||
ಕಾಲೆತ್ತಲೂ ಬರದು ಕಿತ್ತರೂ ಬರದು
ಆಲಿಟ್ಟುದನು ಕೇಳಿ ಸತಿಸುತರೆಲ್ಲ ||24||
ಒಗ್ಗೂಡಿ ಎಳೆದೆಳೆದು ಸೊರಗಿ ಸುಸ್ತಾಗಿ
ಕುಗ್ಗಿ ಕಂಗೆಟ್ಟು ಹಿಮ್ಮೆಟ್ಟಿ ನಿಂತಾಗ ||25||
ದೇವರಿಟ್ಟಂತಾಗಲಿ ನೀವು ತೆರಳಿರೆನೆ
ನೋವುಗೊಂಡವು ಬಂದ ದಾರಿಯ ಹಿಡಿದವು ||26||
ಇತ್ತ ಆ ಮಕರಿ ಕಚ್ಚುತ್ತ ಕಡಿಯುತ್ತ
ನೆತ್ತರಾಯಿತು ಮಡುವಾದ ಮಡುವೆಲ್ಲ ||27||
ಗಜರಾಜ ನನಗಿನ್ನು ದಿಕ್ಕಾರು ಎಂದು
ಅಜಪಿತಗೆ ಮೊರೆಯಿಟ್ಟಿತು ಪರಿಪರಿಯಿಂದ ||28||
ಈರೇಳು ಭುವನವನು ಕಾಯುವಾ ದೇವ
ನೀರೊಳಗೆ ಸಾಯುತಿಹೆ ಬದುಕಿಸೋ ಎನ್ನ ||29||
ವೇದ ಕದ್ದೊಯ್ದ ದಾನವನ ಛೇದಿಸಿದ
ವೇದವಿದ ಮತ್ಸ್ಯಾವತಾರಿ ಸಲಹೆನ್ನ ||30||
ಕಡೆಗೋಲು ಕುಸಿದಾಗ ಹಿಡಿದೆತ್ತಿ ನಿಂತ
ದೃಢದೇಹಿ ಕೂರ್ಮಾವತಾರಿ ಸಲಹೆನ್ನ ||31||
ಹಿರಣ್ಯಾಕ್ಷನ ಕೊಂದು ಧರಣಿಯನೆ ತಂದ
ವರಾಹಾವತಾರಿಯೆ ಬಂದು ಕಾಯೆನ್ನ ||32||
ರಕ್ಕಸನ ಸೀಳಿ ಕರುಳ ಮಾಲೆ ಧರಿಸಿದ
ಬೆಕ್ಕಸಬೆರಗಿನ ನೃಸಿಂಹಾವತಾರಿ ಕಾಯೆನ್ನ ||33||
ಬಲಿಯ ದಾನವ ಬೇಡಿ ಪಾತಾಳಕೆ ತುಳಿದ
ಕಲಿ ವಾಮನಾವತಾರಿಯೆ ರಕ್ಷಿಸೆನ್ನ ||34||
ತಂದೆ ಸಾವಿಂದ ಕ್ಷತ್ರಿಯರ ಕೊಲೆಗೈದ
ತಂದೆ ಪರಶುರಾಮಾವತಾರಿ ಸಲಹೆನ್ನ ||35||
ದಶಕಂಠನನೆ ಕೊಂದು ದರಣಿಜೆಯ ತಂದ
ದಾಶರಥಿ ರಾಮಾವತಾರಿ ಸಲಹೆನ್ನ ||36||
ವ್ಯಾಳನ ತುಳಿದು ಸೋಳಸಾಸಿರ ಹೆಣ್ಣ
ನಾಳಿನ ಕೃಷ್ಣಾವತಾರಿ ಕಾಯೆನ್ನ ||37||
ಕತ್ತಲೆ ಜಗದ ಕನ್ಯೆಯರ ವ್ರತಗೆಡಿಸಿದ
ಬತ್ತಲೆಯ ಬೌದ್ಧಾವತಾರಿ ಉಳಿಸೆನ್ನ ||38||
ಜಗವದುರೆ ಹಯವೇರಿ ದುಷ್ಟರನು ಕೊಂದ
ಮಿಗೆ ಚದುರ ಕಲ್ಕ್ಯವತಾರಿ ಎತ್ತೆನ್ನ ||39||
ಕರುಣಾಕರನೆ ಭಕ್ತ ವತ್ಸಲನೆ ಕಾಯೊ
ಮರೆಯದಿರು ಮಾಧವನೆ ಅಚ್ಯುತಾನಂತನೆ ||40||
ಇಂತು ಪ್ರಾಣದ ಹಂಗುದೊರೆದು ಚೀರ್ದಾಗ
ಕಂತುಪಿತ ಕೇಳಿ ಮಂತಾಡಿದಂತಾಗಿ ||41||
ಹಾಲ್ಗಡಲ ವಾಸಿ ಹಾವು ಹಾಸಿಗೆ ಬಿಟ್ಟು
ಪಾಲಿಸಲು ಪರಿತಂದ ಗಜೇಂದ್ರನ ಬಳಿಗೆ ||42||
ಹರನು ಪಾರ್ವತಿಯೊಡನೆ ವೃಷಭವನೇರಿ
ತ್ವರಿತದಿಂ ಬಂದರಲ್ಲಿಗೆ ಕಾತರದಿ ||43||
ದೇವಾನುದೇವತೆಗಳು ಮುನಿವರೇಣ್ಯರು
ಕಾವನಯ್ಯನ ಹಿಂದೆ ಬಂದರೋಡೋಡಿ ||44||
ನಕ್ರನ ಹಲ್ಲು ಮುರಿವಂತೆ ಜಗದೊಡೆಯ
ಚಕ್ರದಲಿಡಲು ಶಾಪ ವಿಮುಕ್ತಿ ದೊರಕಿತು ||45||
ಋಷಿ ದೇವಲನ ಶಾಪದಿಂ ಗಂಧರ್ವ
ಋಷಿ ಅಗಸ್ತ್ಯನ ಶಾಪದಿಂ ಪ್ರದ್ಯುಮ್ನ ||46||
ಇರ್ವರೂ ವಿಶ್ಯಾಪದಿ ಮೊದಲಂತಾದರು
ಸರ್ವರೂ ಆದಿಕೇಶವನ ಕೊಂಡಾಡಿದರು ||47||