ನರಸಿಂಹಾವತಾರ

Category: ಶ್ರೀನರಸಿಂಹ

Author: ಕನಕದಾಸ

ಓಂ ನಮೋ ನಾರಾಯಣ ಶೌರಿ
ಓಂ ನಮೋ ನಾರಾಯಣ
ಓಂ ನಮೋ ನಾರಾಯಣಾಯ ಬ್ರಹ್ಮ ವಂದಿತ
ಓಂ ನಮೋ ಪರಬ್ರಹ್ಮ
ಪನ್ನಗಾಧಿಪಶಾಯಿ ಪಾವಕಾಂಬಕ ಮಿತ್ರ
ಸನ್ನುತಾಮರ ಮುಖ್ಯ ಸಕಲ ಸನ್ಮುನಿ ಸೌಖ್ಯ
ಚನ್ನಕೇಶವ ಪಾಹಿಮಾಂ ಶೌರಿ ಓಂ ನಮೋ ||ಪ||

ಕೃತಯುಗದೊಳೊಬ್ಬನತಿ ಕ್ರೂರ ದೈತ್ಯಾಧಮನು
ಕ್ಷಿತಿಯೊಳುದಿಸಿದನು ಸುತನೆನಿಸಿ ಆತಗೆ ನಾಮ
ಹಿತದೊಳೊಪ್ಪಿತು ಹೇಮ ಕಷ್ಯಪು ತಾನೆನಲವನ
ಸತಿ ಸುಶೀಲೆ ಎಂಬಳ
ವ್ರತ ಪುಣ್ಯದಿಂದ ಶ್ರೀಪತಿ ಪದಾಂಬುಜ ಭಕ್ತ
ಚತುರ ಮಾನ ವರ ಪ್ರಹ್ಲಾದ ನಾಮಾಖ್ಯಾತ
ಸುತನೊರ್ವ ಜನಿಸಿದನು ಸತಿಯ ಸುಕೃತವದೇನೊ
ಮಿತವಿಲ್ಲ ಮಹಿಯೊಳಗೆ ||1||

ಮದಮುಖನು ಮನದಿ ಹಿಗ್ಗಿದನು ಮಗುವನು ನೋಡಿ
ಸುದತಿಯ ತಕ್ಕೈಸಿ ಶುಕ್ರಾದಿ ಗುರುಗಳನು
ವಿಧವಿಧದೊಳರ್ಚಿಸುತ ವಿಭವದಿಂದೊಯ್ದಾಡಿ
ಮನಸಿಜ ವೈರಿಯ ಪೂಜಿಸಿ
ಮುದದಿಂದ ಮಗನ ತೆಗೆದಪ್ಪಿ ಮುದ್ದಿಸುತೊಮ್ಮೆ
ಮೃದು ನುಡಿಗಳ ಲಾಲಿಸಿ ಸುತಗೊದಗಲೈದಾರ್ವರುಷ
ಅದರೊಳೊಂದು ದಿನ ತಮ್ಮ ಗುರು ಶುಕ್ರಾಚಾರ್ಯ
ರನು ಕರೆಸಿ ನೇಮವನಿತ್ತನು ||2||

ಪರಮಗುರು ನೀನೆನುತ ತರಳನನು ಪತಿಕರಿಸಿ
ಕರುಣದಿಂದೋದಿಸು ಒರೆದು ಶಾಸ್ತ್ರಾಗಮನವ
ಪರಿಪರಿಯ ವಿದ್ಯಗಳನರುಹು ರಾಕ್ಷಸ ಬೃಂದ
ಗುರುವರನೆ ಮರ್ಮವಿಡದೆ
ತೆರಳಿನ್ನು ಸುತಸಹಿತ ಕರುಣನಿಧಿ ನೀಯೆಂದು
ತರಿಸಿ ದಿವ್ಯಾಂಬರ ಸುಗಂಧ ತಾಂಬೂಲವನು
ಹರುಷದಿಂದಿತ್ತು ಸತ್ಕರಿಸಿ ಗುರುವರನಂಘ್ರಿ
ಗೆರಗಿ ಕೈಮುಗಿದು ನುಡಿದ ||3||

ಮತ್ತೆ ಲಾಲಿಪುದು ನಾ ಪೆತ್ತ ಭಕ್ತನಿಗೆ ಒಂ
ದರ್ತಿಯಿಂ ಮೊದಲಿನಭ್ಯಾಸದಲಿ ಎನ್ನನುರೆ
ವಿಸ್ತರಿಸಿ ಪೊಗಳ್ವ ತೆರನಂತೆ ಓದಿಸು ಜೀಯ
ಪುತ್ರರತ್ನವನೆನುತ
ಉತ್ತರವ ಕೊಡಲು ಗುರು ಚಿತ್ತದಲಿ ಹರ್ಷಿಸುತ
ಭಕ್ತ ಚಿಂತಾಮಣಿಯೆ ಬಾರೆಂದು ಮುಗುಳ್ನಗೆಯಿಂದ
ಎತ್ತಿ ತಕ್ಕೈಸಿ ಮುದ್ದಾಡಿ ಮುಗುಳ್ನಗೆಯಿಂದ
ಉತ್ತಮರ ಸಾಲೆಗೊಯ್ದ ||4||

ಓದಿಸಿದ ಸಕಲ ವೇದಾದಿ ಪೌರಾಣಗಳ
ಸಾಧನೆಯ ಮಾಡಿಸಿದ ಶಾಸ್ತ್ರ ತರ್ಕಂಗಳಿಗೆ
ಆದಿಯಲಿ ಓಂ ನಮೋ ಹಿರಣ್ಯಕಶ್ಯಪು ಎಂಬ
ಭೇದಾಕ್ಷರವ ಪೇಳೆನಲು
ಶ್ರೀಧರಾಚ್ಯುತ ಮುಕುಂದಾದಿಕೇಶವ ಕೃಷ್ಣ
ಮಾಧವಾ ಎಂಬ ಮುರಹರಿಯ ನಾಮವ ಪೊಗಳೆ
ಸಾಧು ಸುಜನನ ಬೈದು ಜಡಿದು ದಂಡಿಸಿ ಇವನು
ವಾದಿ ನಮಗೆಂದ ವಿಪ್ರ ||5||

ಒಡನೆ ಮನ್ನಿಸುತ ತೊಡೆಯ ಮೇಲಿಂಬಿಟ್ಟು
ನುಡಿ ಮಗನೆ ನಿನ್ನ ಪಡೆದವನ ನಾಮವನೆನಲು
ಮೃಡನಾಣೆ ಕಾಮನಯ್ಯನ ಅಡಿಯ ಪೊಗಳದೆಯೆ
ಬಿಡೆನು ಘನವೆನ್ನಲೀ
ಒಡೆಯನಹ ವಾಸುದೇವನ ಪೊಗಳ್ವ ಸುಜನರಿಗೆ
ಈಡಾರು ತ್ರಿಜಗದೊಳು ಕಡುದಯಾನಿಧಿ ಎನಲು
ಪಿಡಿದೆತ್ತಿ ಮಂಕು ಮರಳಿನ ಮಗನೆ ಕಮಲಾಕ್ಷ
ಕಡುದ್ರೋಹಿ ನಮಗೆಂದನು ||6||

ಎಂದ ನುಡಿಗೇಳುತಿಂತೆಂದ ಗುರುವರ ನಿನ್ನ
ಮಂದಮತಿಗಿನ್ನೇನು ನಾನು ಬಿನ್ನೈಸುವೆನು
ಇಂದಿರಾ ದೇವಿಯರಸನ ಮಹಿಮೆಗಳ ಪೊಗಳೆ
ಚಂದ್ರಶೇಖರನಿಗರಿದು
ಸಿಂಧು ಶಯನನ ಚರಿತೆ ಶ್ರವಣ ಮಾಡಲು ಪಾಪ
ಬಂಧನವೆಲ್ಲವು ಪರಿದು ಪೋಪುದು ದಾನವೇಂದ್ರನನು
ಪೊಗಳಿ ನರಕವನು ಸಾರುವೆನೆ ಸಂಕ್ರಂದನಾರ್ಚಿತನ ||7||

ಉತ್ತರವ ಪೇಳಿಯೊಡನೆಂದನುತ್ತರವನು ಕೊಡಲಾಗ
ಅತ್ಯುಗ್ರದಿಂದ ಶಿರವೆತ್ತಿ ಗರ್ಜಿಸುತೆದ್ದು
ಒತ್ತಿ ಪಿಡಿದೆಳೆದು ಪುರುಷೋತ್ತಮ ತತ್ಪದಾಂಬುಜ ಭೃತ್ಯನ
ಕಿತ್ತಿಟ್ಟು ಬಾಯ ದಾಡೆಯ ಪಿಡಿದು ಒಳದೊಡೆಯ
ಮತ್ತೆ ಪಿಡಿದೊಡದಿರುಹೆ ನೆತ್ತನೊರೆಯಲು ಕಂಡು
ಚಿತ್ತದಲಿ ಕಡುನೊಂದು ಚಿಣ್ಣ ಮೊರೆಯಿಟ್ಟನಾ
ಚಿತ್ತಜನ ಪೆತ್ತಾತಗೆ ||8||

ಅನಿತರೊಳಗಾ ಉಪಾಧ್ಯನು ಕರುಣದಿಂದಲಾ
ಘನತರಾದ್ಭುತಮಪ್ಪ ಕಠಿಣತರ ದಂಡನೆ
ಯನು ಭರದಿ ಮನ್ನಿಸುತ ನೆನೆ ಪಿತನ ಎನಲಾಗ
ನೆನೆದ ನರಹರಿಯಂಘ್ರಿಯ
ವನಜದಳ ನಯನನನು ವಲಿದಾಗಿ ಪೊಗಳುತಿರೆ
ಮನದಿ ಯೋಚಿಸಿದ ಮತ್ತೊಂದು ಗುರುಮಠದೊಳಿಹ
ತನಯರುಗಳೀ ಹದನ ತಪ್ಪಿಸುವರಲ್ಲದಿರೆ
ತನಗಸಾಧ್ಯವಿದೆಂದ ||9||

ಎಂದು ಚಿಂತಿಸುತಲಾ ನಂದನರ ಕರೆದು ಈ
ನಂದನನು ಮತ್ತಾ ಮುಕುಂದನನು ಪೊಗಳುವನು
ಮಂದಮತಿ ಬಿಡಿಸಿವನ ತಂದೆಯನು ಪೊಗಳಿಸುವ
ಅಂದ ನಿಮ್ಮದು ಕೇಳಿರೊ
ಎಂದು ನೇಮಿಸೆ ಗುರುಗೆ ವಂದಿಸುತ ತರಳರೈ
ತಂದ ಪ್ರಹ್ಲಾದನಿಂಗಂದು ಮಣಿಯಲು ಸಖರಿ
ಗಂದೊರೆದನಾಗಲರವಿಂದನಾಭನ ಕೃತಿಯ
ಸುಂದರದ ಮೃದು ನುಡಿಯ ||10||

ಉಪದೇಶವಿತ್ತನಾ ನಿಪುಣ ಬಾಲಕನೆಂದು
ಚಪಳರಾದರು ಹಿಂದಣಪರಿಮಿತ ಜನ್ಮಗಳ
ರಿಪುಗಳ ಪಾಪವ ನೀಗಿ ಕೃಪೆಯಾದ ಹರಿಯೆಂದು
ಗುಪಿತವಿಲ್ಲದೆ ಪೇಳುತ
ಜಪ ತಪ ಧ್ಯಾನ ಷಟ್ಕರ್ಮ ನಮಗೇಕಿನ್ನು
ಸಫಲವಾಯಿತು ಪೆತ್ತ ಜನನಿ ಜನಕರ ಉದರ
ಅಪಭ್ರಷ್ಟನೀ ಶುಕ್ರನಿಂತು ಪೇಳಿದ ಕುಟಿಲ
ಕಪಟ ನೀತಿಗಳ ಸುಡಲಿ ||11||

ಎಲ್ಲಿಯವನಿವನೆಮಗೆ ಒಳ್ಳೆ ನೀತಿಯ ಪೇಳ್ದ
ಸೊಲ್ಲಿನೊಳಗೆ ಗರವೆಳ್ಳನಿತಿಲ್ಲ ಹರಿಯೆಂಬ
ಪುಲ್ಲನಾಭನ ಧ್ಯಾನ ಪರತತ್ತ್ವ ರಚನೆಗಳ
ನಿಲ್ಲಿ ಕಂಡೆವೆಂದರು
ಬಲ್ಲೆವಿನ್ನೇಕೆ ನಮಗಿಲ್ಲ ಗುರು ನೀನಲ್ಲ
ದೆಲ್ಲರನು ಭಾವಿಸುವವರಲ್ಲ ವೈಕುಂಠ
ವಲ್ಲಭನ ತೋರೆನುತ ಎಲ್ಲರಾ ಬಾಲಕನ
ಪಲ್ಲವಾಂಘ್ರಿಗೆ ಮಣಿದರು ||12||

ಅನಿತರೊಳು ಬಂದನಾ ದನುಜ ಗುರುಮಠದೊಳಿಹ
ತನಯರೆಲ್ಲರು ವಿಷ್ಣು ವನಜಾಂಘ್ರಿ ಪೊಗಳುತಿರೆ
ಘನ ಮಹಿಮ ನೀನರಿದೆನ್ನ ಗಣನೆಗೊಳನೆಂದೆನುತ
ದನುಜೇಶನೆಡೆಗೆ ಬಂದಾ
ತನಿಗೆ ಸಾಗದು ನಿನ್ನ ತನಯನಭ್ಯಾಸಿಸಿದ
ಚಿನುಮಯಾತ್ಮನ ಚರಣ ಸ್ಮರಣೆಯನು ಸರ್ವರಿಗೆ
ಎಣಿಸಲಳವಡದು ನಿನ್ನಣುಗನಂತರವೆನಲು
ದನುಜ ಗರ್ಜಿಸುತೆದ್ದನು ||13||

ಬಂದು ಸಾಲೆಯೊಳಿರ್ದ ನಂದನನ ಬಿಗಿಯಪ್ಪಿ
ಕಂದ ನೀ ಕಲಿತುದೇನೆಂದು ಪೇಳೆಂದೆನಲು
ತಂದೆ ಲಾಲಿಪುದು ಗೋವಿಂದನಾ ಚಾರಿತ್ರ
ದಂದವನು ಪೇಳ್ವೆನೆಂದ
ಎಂದ ಬಾಲಕನೊಳಿಂತೆಂದನಾ ದೈತ್ಯಪತಿ
ಸಂದುದಲ್ಲವು ನಾವು ವಂದಿಸುವುದು ಹರಿಗೆ
ಚಂದದಿಂದೆನ್ನ ಓಂ ಹಿರಣ್ಯಕಶಿಪು ಎಂಬು
ದೊಂದನೊರಲು ಎಂದನು ||14||

ಪಿತನೆ ಲಾಲಿಸು ಹಿಂದೆ ಶತಮಖನ ಸಹಿತ ದಿಕ್ಪತಿಗಳೆಲ್ಲರು
ಲಕ್ಷ್ಮೀಪತಿಯ ನಾಮಾಮೃತವನತಿಶಯದಿ ಜಪಿಸುವ ಪರಿಯೊಳು
ಉನ್ನತಿಯ ಶ್ರುತಿ ವಚನ ಶಬ್ದಗಳಲಿ
ಸತತ ನಂಬಿರಲು ಸದ್ಗತಿಯಲ್ಲಿ ಧನ್ಯರ
ಗತಿಯ ಬಯಸುವರುಂಟೆ ಕ್ಷಿತಿಯೊಳೀ ಜನ್ಮಕ್ಕೆ
ಮಿತಿಯಿಲ್ಲ ವಿಷ್ಣು ನಾಮವ ಪೊಗಳ್ವ ಸುಜನರಿಗೆ
ಗತಿಯಿಲ್ಲದಿಲ್ಲ ಜಗದಿ ||15||

ಎಂದರುಹುತಿರೆ ಕರ್ಣಗಳಿಗೆ ನಾಟಿದ ಶಸ್ತ್ರ
ದಂದವಾದುದು ಇವನು ನಂದನನೆ ಎನಗೆ ಮುಚು
ಕುಂದ ವರದನ ಕೃಪೆಯನೊಂದನಾರೈಸಿದನು
ಮಂದರಾದ್ರಿಯ ಮೇಲೆ
ಚಂದದಿಂದೊಯ್ದು ಭೂಮಿಗೆ ಕೆಡಹಿಸೆಂದೆನುತ
ಲಂದು ಕಟ್ಟಳೆಯಿತ್ತು ಮಂದಿರಕೆ ಸಾರಲಾ
ಕಂದನನು ಸೆಳೆದೊಯ್ದು ಗಿರಿಯನೇರಿಸಿ ನಿನ್ನ
ತಂದೆಯನು ಪೊಗಳೆನ್ನಲು ||16||

ವಾಸುಕಿಶಯನ ವಾಸವನಮಿತ ವನಜಾಕ್ಷ
ಕೇಶವ ಮುರಾರಿ ಕೌಸ್ತುಭ ವಕ್ಷ ಕಮಲಾಕ್ಷ
ಭೂಸತಿ ರಮಣ ನಗಧರಾಚ್ಯುತನೆನ್ನುವ
ಈಶಸಖಭಯವಿನಾಶ
ವಾಸಿ ತಗ್ಗಿತು ಪ್ರಾಣದಾಸೆ ನಿಮ್ಮದು ಜೀಯ
ದೋಷಕರು ಎನ್ನ ಗಾಸಿಗೊಳಿಸುತ ಎಳೆತಂದು
ಲೇಸು ದಯವಿಲ್ಲದಾಯಾಸಪಡಿಸುವರೆನ್ನ
ಪೋಷಣೆಯು ನಿಮ್ಮದೆನುತ ||17||

ಮೊರೆಯಿಡುವ ಬಾಲಕನ ಪರಿಯ ನೋಡದೆ ಕೊಂಡು
ಗಿರಿಯ ಮೇಲಕೈತಂದು ತರಳನೆನ್ನದೆ ಹಿಡಿದು
ಚಾರು ಕರಕಮಲಗಳ ಕರ ಚರಣವುರೆ ಕಟ್ಟಿ
ನಿರ್ದಯದಿ ಹೊರಳಿಸಿದರಾಗ ಧರೆಗೆ
ಸಿರಿಧರನೆ ನಿನೆ ಗತಿಯೆಂದು ಸ್ಮರಣೆಯಗೈದು
ಕರುಣನಿಧಿ ಕಾವುದೆಂದೆನುತ ಕಂಗಳ ಮುಚ್ಚಿ
ಗಿರಿಶಿರದ ಜರಿಯೊಳಿರಲು ತಾ ಬೀಳೆ ಧರಣಿ ಸತಿ
ಮರುಗಿ ಮಗುವನು ಪಿಡಿದಳು ||18||

ಬಾಲಕನ ಪಿಡಿದು ಬಿಗಿದಪ್ಪಿ ಲಾಲಿಸಿ ಪುಣ್ಯ
ಶೀಲ ಭಯಬೇಡ ಎನ್ನಾಲಿಯಂ ನೋಡೆನ್ನ
ನೀಲವರ್ಣನ ಪಾದ ನಿರುತ ನಂಬಲು ನಿನ್ನ
ಪಾಲಿಪನು ಪರಮ ಪುರುಷ
ಶೂಲಿ ಸನ್ಮಿತ್ರ ಸುಚರಿತ್ರ ಗುರು ಮುನಿಸ್ತೋತ್ರ
ವ್ಯಾಳಶಯನ ಗಾತ್ರ ಉಷ್ಣಾಂಶು ಶಶಿನೇತ್ರ
ಲೀಲೆಯಿಂ ಪೊರೆವ ಪೋಗೆಲೆ ಮಗನೆ ಮನೆಗೆನಲು
ಕಾಲಿಗೆರಗುತ ಸಾರಿ ಮನೆಗೆ ಬರಲು ||19||

ಬಂದು ಮಠದೊಳಗಿರ್ದ ಕಂದನಾಕೃತಿ ಕೇಳಿ
ಮಂದಿರದೊಳಿರ್ದ ಮಾತೆಯು ಮರುಗಿ ಮಗನೆಡೆಗೆ
ಬಂದಾಗ ಎತ್ತಿ ತಕ್ಕೈಸಿ ಕಣ್ಣಲಿ ನೀರ
ತಂದು ಸುತಗಿಂತೆಂದಳು
ಇಂದಿರಾ ಪತಿ ದೈತ್ಯರಿಗೆ ದ್ರೋಹಿಯು ಅವನನು
ವಂದಿಸುವುದುಚಿತವೇ ತಂದೆಯಾಜ್ಞೆಯ ಮೀರ
ಲೆಂದಿಗಂ ನರಕ ತಪ್ಪದು ಎನಲು ವೈಷ್ಣವನು
ಅಂದ ಮಾತೆಯ ಮನ್ನಿಸಿ ||20||

ತಾಯೆ ಲಾಲಿಪುದೆನ್ನ ಬಾಯ ವಚನವ ನಿನ್ನ
ಪ್ರಿಯನನು ಪೊಗಳಿದೊಡೆ ಹೇಯ ನರಕವು ಮುಂದೆ
ನೋಯಲಾರೆನು ಹೀನ ಜೀವಿಗಳು ಉದ್ಭವಿಸಿ
ಆಯಾಸಗಳಲಿ ಸಿಲ್ಕಿ
ಮಾಯದಪವಾದಗಳ ಮಹಿಯ ಭೋಗವ ಸುಡಲಿ
ತಾಯಾರೆನಗೆ ತಂದೆಯಾರೆಂಬ ಕುರುಹೆಲ್ಲಿ
ನೋಯಲೇತಕೆ ನಿನ್ನ ಜೀವವಲ್ಲಭನೆಡೆಗೆ
ತಾಯೆ ನೀ ತೆರಳೆನ್ನಲು ||21||

ಮರುಗಿದಳು ಮಗನ ಭಾವದ ಪರಿಯ ಬಣ್ಣಿಸುತ
ತೆರಳಿದಳು ಹರಿಯೆ ಕರುಣಿ ಸುಕಂದನನು ನಿನ್ನ
ಚರಣ ನಂಬಿದ ಬಳಿಕ ಪೊರೆವ ಬಿರುದಿನ ಪರಿಯ
ಸಿರಿಯರಸ ನಿನ್ನದೆನುತ
ಹರಿಗೆ ಮೊರೆಯಿಡುತ ತನ್ನರಮನೆಗೆ ನಡೆತಂದು
ಅರಸನಿರ್ದೆಡೆಗೈದಿ ಅರಿಯ ಸುತ ನೀತಿಯನು
ದೊರೆಯೆ ಮನ್ನಿಸಿ ಮಗನ ಪೊರೆವುದು ಚಿತವೆಂದಾ
ತರುಣಿಗಿಂತೆಂದನಾ ದೈತ್ಯ ||22||

ಬಿಡು ಕಾಂತೆ ಜಠರದೊಳು ನೀ ಪಡೆದ ಮಗನಲ್ಲ
ಪಡಿಯಿಡಲು ನಮ್ಮ ಕುಲಕೆಡಮೃತ್ಯುವಾಗಿಹನು
ನುಡಿಯದೆಮ್ಮನು ಎನ್ನ ಒಡೆಯ ವಿಷ್ಣುವು ಎನ್ನು
ತಡಿಗಡಿಗೆ ಪೊಗಳುತಿಹನು
ಒಡನೆ ಮುರಹರಿ ಎಂದು ಸ್ಮರಿಸಲಾತನ ಶಿರವ
ಕೆಡಹಿದಲ್ಲದೆ ಬಿಡೆನು ಮಡದಿ ನಿನ್ನರಮನೆಗೆ
ನಡೆಯೆನುತ ಗರ್ಜಿಸಲು ಪೊಡವಿ ನಡುಗಿದುದೊಡನೆ
ನಡೆದನತಿ ರೌದ್ರದಿಂದ ||23||

ಅರಮನೆಗೆ ಬಂದೋರ್ವ ಚರನನಟ್ಟಿ ಕರೆಸಿದನು
ತರಳನನು ತಮ್ಮ ಕುಲಗುರು ಶುಕ್ರಚಾರ್ಯನನು
ಬರಲು ಸತ್ಕರಿಸಿದನು ಹರುಷ ಮಿಗೆ ಮನ್ನಿಸಿದ
ಸಿರಿವರನ ಸೇವಕನನು
ಮರಳಿ ಕೇಳ್ಮಗನೆ ಶ್ರೀಹರಿಯ ನಾಮಾಕೃತಿಯ
ಸ್ಮರಿಸಲಾತನೀಜಗದಿ ಮಿಗಿಲೆ ಮೂಢನವನು
ಅರಿಯೆ ನೀ ಮಗನೆ ನರ ಕುರಿಯ ತೆರನಂತೆ
ಸಿರಿಹರಿಯೇನು ಘನವೋ ನಿನಗೆ ||24||

ಇನ್ನಾದರೆಲೆ ಮಗನೆ ಎನ್ನ ನೀ ಪೊಗಳೆನಲು
ಪನ್ನಗಾರಿಧ್ವಜನ ಪಾದಗಳ ವಂದಿಸುತ
ಓಂ ನಮೋ ನಾರಾಯಣಾ ಎಂದು ಧ್ವನಿಯೆತ್ತಿ
ಚಿಣ್ಣನೋದಿದ ಶ್ರುತಿಗಳ
ಉನ್ನತದ ವಚನಗಳು ಉಪನಿಷದ್ ವಾಕ್ಯದಲಿ
ಚೆನ್ನಕೃಷ್ಣಾ ಎಂಬ ಚೆಲುವ ನಾಮವ ಪೊಗಳೆ
ಮನ್ನಿಸದೆ ಮನದ ಕೋಪದಿ ದೈತ್ಯ ಪೊರೆಗಳೆದ
ಪನ್ನಗಾಂಕನ ಪೊಗಳ್ದನು ||25||

ಎಲೆ ಹಸುಳೆ ಹರಿಯಾವ ನೆಲೆಯೊಳಿರುತಿಹನವನ
ಬಲುಹ ನೋಡುವೆನೆನಗೆ ತಿಳಿಯ ಪೇಳೆಂದೆನಲು
ಅಳುಕದವನೊಡನೆಂದನೆಲೆ ದೈತ್ಯ ಕೇಳೊಮ್ಮೆ
ನಳಿನನಾಭನ ಪರಿಯನು
ಜಲಧಿ ಮಧ್ಯದೊಳಿರುವ ಜಲಧಿ ಮೇಲೊರಗಿರುವ
ಇಳೆಯು ಮೂರರಲಿರುವ ಇಳೆಗೊಡೆಯನೆನಿಸಿರುವ
ಒಳಗಿರುವ ಹೊರಗಿರುವನೊಲಿದು ಸರ್ವದಲಿರುವ
ನೆಲೆಯಿಲ್ಲ ನಗಧರನಿಗೆ ||26||

ಎನೆ ಕೇಳಿ ಕೋಪದಿಂದಲಿ ಗರ್ಜಿಸುತಲೆದ್ದು
ದನುಜಾಧಿಪತಿ ತನ್ನ ತನಯನಂ ದಂಡಿಸುತ
ಚಿನುಮಯಾತ್ಮನ ತೋರು ಸ್ತಂಭದೊಳಗಿಲ್ಲದಿರೆ
ಶಿರವ ಖಂಡಿಪೆನೆನುತ
ಘನ ರೋಷ ವಹ್ನಿ ಜ್ವಾಲೆಯಲಿ ಕಿಡಿಯಿಡುತೊಡನೆ
ತನ್ನ ಕರದ್ವಯದೊಳಗೆ ದಿವ್ಯ ಖಡ್ಗವ ಪಿಡಿದು
ತನಯನೆನ್ನದೆ ತಲೆಯನರಿವ ತವಕದಿ ಬರಲು
ಮನದೊಳಳುಕದೆ ನೆನೆದ ಮಧುವೈರಿಯ ||27||

ತಾತ ನೀ ಕಾವುದೀ ಪಾತಕನು ಎನ್ನನುರೆ
ಘಾತಿಸುವ ಲೋಕವಿಖ್ಯಾತ ಮೂರುತಿ ನಿನಗೆ
ಮಾತುವಾಸೆಯ ಮೇಲೆ ಮಮತೆ ಇರ್ದಡೆ ಎನ್ನ
ಪ್ರೀತಿಯಲಿ ಪಾಲಿಸೊ
ಮಾತೆ ಮುನಿದಿಹಳೆನ್ನ ಭ್ರಾತೃಬಂಧುಗಳಿಲ್ಲ
ನೀತಿಯಲ್ಲವು ಎಂಬ ಮಾತು ಪೇಳ್ವರ ಕಾಣೆ
ಭೂತನಾಥಾದಿ ವರಬ್ರಹ್ಮ ವಂದಿತ ನೋಡು
ಈತನಿಂ ಮೃತನಾಗುವೆ ||28||

ತರಹರಿಸಲಾರೆನೀ ದುರುಳನುರವಣೆಗೆನ್ನ
ಪರಿ ನೋಡದೆಯೆ ನಿಮ್ಮ ಸಿರಿಯ ಸಂಪತ್ತಿನಲಿ
ಮರೆದು ಮರೆಯೊಳಗಿರ್ಪ ಮುರಹರನೆ ನೋಡೆನ್ನ
ತರಿದು ಸುಡುವ ಧರೆಯೊಳು
ಕರುಣ ನಿನಗೇಕಿಲ್ಲ ಕಾವರಿಳೆಯೊಳಗಿಲ್ಲ
ಮರಣ ನಿಶ್ಚಯವಲ್ಲದಿರವು ಕಾಣಿಸಲಿಲ್ಲ
ದುರುಳ ಮನ್ನಿಪುದಿಲ್ಲ ದೋಷಕಂಜುವನಲ್ಲ
ಹರಿಯೆ ನೀನಲ್ಲದಿಲ್ಲ ||29||

ಎಂದೊರಲುತಿರೆ ದೈತ್ಯನಂದು ಕೋಪದಿ ತನ್ನ
ನಂದನನ ಕಠಿನದಿಂ ಕೊಂದೆಳೆವೆನೆಂದು ಬರೆ
ನೊಂದು ನಿನ್ನಾಣೆ ನಾರದವಿನುತ ಕಾಪಾಡು
ತಂದೆ ಬಂದು ತ್ವರೆಯಿಂದೆ
ಇಂದೆನಗೆ ದಿಕ್ಕಾರು ನಿನ್ನುಳಿದು ಗೋವಿಂದ
ಮುಂದೆನಗೆ ದಿಕ್ಕಾರು ನಿನ್ನುಳಿದು ಸಿರಿವರದ
ಬಂದೀಗ ಕಾಯೆನ್ನ ಅರವಿಂದನಾಭನೆನೆ
ಭಕ್ತ ವರದನು ಹೊರಟನು ||30||

ಅಗಧರನು ತಾಳ್ದ ನರಮೃಗದ ರೂಪೊಂದಾಗಿ
ಪೊಗೆಯಡರಿ ಕಂಬವಿಬ್ಭಾಗವಾಗಿ ದಳ್ಳುರಿ
ಭುಗಿಲು ಭುಗಿಲೆನುತೆದ್ದು ನರಹರನ ಕೈಲಾಸ
ಕೆಗರಿತಾ ಕಿಡಿಗಳು
ನಗಧರನ ರಿಪು ಪುರಿಯ ಮಿಗೆ ಜಗದ ನೆರೆ ನಾಲ್ಕು
ಮೊಗದವನ ಪಟ್ಟಣವ ನೆಗೆದು ಪಾವಕನದಿರೆ
ನಿಗಮಗೋಚರನಾಗ ಜಗದೊಳಗವತರಿಸಿದನು
ಮಗುವು ಮೊರೆಯಿಡಲು ಕೇಳಿ ||31||

ಸಿಟ್ಟಿನಿಂದಾಗ ಕಡುಕೆಟ್ಟ ದಾನವನ ತಾ
ಕುಟ್ಟಿ ನಿಟ್ಟೆಲುಬುಗಳ ಮುರಿದೊಟ್ಟಿ ಬಾಗಿಲೊಳು
ದಿಟ್ಟವಹ ತೊಡೆಯ ಮೇಲಿಟ್ಟು ನಖ ಶಸ್ತ್ರದಿಂ
ಮುಟ್ಟಿ ಹೊಟ್ಟೆಯನು ಬಗೆದ
ತೊಟ್ಟಿಡುವ ಶೋಣಿತವ ನೆಟ್ಟನಾಪೋಶಿಸುತ
ಇಟ್ಟು ಕರುಳಿನ ಮಾಲೆ ಜಟ್ಟಿಯಾದನು ಜಗದಿ
ಧೃಷ್ಟ ಮೂರುತಿ ಕಂಡು ಸುರರು ಪೊಗಳುತ ಪುಷ್ಪ
ವೃಷ್ಟಿಗಳ ಸುರಿದರಾಗ ||32||

ದುರುಳನನು ತರಿದ ನರ ಹರಿಯ ಕೋಪಜ್ವಾಲೆಯು
ಉರೆಯಾವರಿಸೆ ಜಗವ ಗಿರಿಜೆಯರಸನು ಒಡನೆ
ಸರಸಿಜಾಸನ ಸಹಿತ ಸುರಪತಿಯು ಮೊದಲಾಗಿ
ನೆರೆದು ದಿಕ್ಪಾಲಕರೆಲ್ಲ
ಪರಿಪರಿಯಲರ್ಚಿಸುತ ಸ್ಮರಣೆಗೈಯಲು ಶೌರಿ
ಕರುಣವಿನಿತಿಲ್ಲದುರುಹುತಿರೆ ಲೋಕವ ಸ್ಮರಿಸಿ
ದರು ಸಿರಿಯ ಸತ್ಕರಿಸಿದರು ಬಾಲಕನ ಹರಿಯ
ಮನ್ನಿಸಲೋಸುಗ ||33||

ಒಡನೆ ಬಾಲಕನು ಅಡಿಯಿಡುವ ಲಕ್ಷ್ಮೀ ಸಹಿತ
ನಡೆತರಲು ಕಂಡು ಕೈಪಿಡಿದೆಳೆದು ಮಡದಿಯನು
ತೊಡೆಯ ಮೇಲಿಟ್ಟು ಮೈದಡವಿ ಬಾಲನನೆತ್ತಿ
ನುಡಿದ ನರಸಿಂಹನಾಗ
ಬಿಡು ಮಗನೆ ನಿನ್ನ ಮನದೊಳಗಿರ್ದ ಭಯಗಳನು
ಮಡಿದ ರಾಕ್ಷಸನು ಈ ಪೊಡವಿಯಲಿ ಸುಖಬಾಳು
ನಡೆಯೆನುತ ಮಗುವ ಮುದ್ದಾಡಿ ಮುಗುಳುನಗೆಯಿಂ
ತೊಡೆಯಿಳುಹಿ ಕಳುಹಿದಾಗ ||34||

ಹರಬ್ರಹ್ಮ ಮೊದಲಾದ ಸುರರು ದಿಕ್ಪಾಲಕರು
ಹರಸಿದರು ತರಳ ಸುಖ ಬಾಳು ಧರಣಿಯೊಳೆಂದು
ಮೊರೆದುದಾ ದೇವ ದುಂದುಭಿಗಳಂಬರದೆಡೆಯ
ನೆರೆದು ನಾರಿಯರಾಕ್ಷಣ
ಹರಿಯೆ ಕರುಣಾಳು ಕಂಜಜನಯ್ಯ ನೀ ಎಮ್ಮ
ವಿಷ್ಣುವಿನಾಶಕ ಸಿಂಹಾವತಾರದಲಿ
ಕಾಮಿತಾರ್ಥ ಪ್ರದಾಯಕ ಶ್ರೀನರಸಿಂಹ ||35||

ಕಡಲಸುತೆ ಸಹಿತಲಾಗ ಕಡು ಮನ್ನಿಸುತೆ ಕಳುಹಿ
ನಡೆದು ವೈಕುಂಠದೊಡೆಯನಾದನು ಶೌರಿ
ಅಡಿಯ ನಂಬಿಹ ದಾಸರೆಡೆಬಿಡದೆ ಕಾಯ್ದಿಹನು
ನುಡಿಯಲಳವಡದ ಮಹಿಮೆ
ಮೃಡನ ಸಖನಡಿಯ ಮನ ದೃಢದಿ ಭಜಿಸುವ ಸುಜನ
ರೆಡೆಗೆ ಬಾರರು ಜಗದಿ ಯಮರಾಜ ಕಿಂಕರರು
ಜಡದೇಹಿಗಳಿಗೆಲ್ಲ ಕೊಡುವ ಸದ್ಗತಿಗಳನು
ಕಡು ಕೃಪಾನಿಧಿ ಕೃಷ್ಣನು ||36||

ಆರಾದರಿದನು ಉದಯದಲಿ ಭಜಿಸಲು ಪೂರ್ವ
ಪ್ರಾರಬ್ಧ ಕರ್ಮ ಬಯಲಾಗಿ ಪರಿದೋಡುವುದು
ಶ್ರೀರಮಣನೊಲಿದು ಸದ್ಗತಿಯ ಕೊಡುವನು ಕಡೆಯ
ಲಾರೊಂದು ಜನ್ಮಗಳಿಗೆ
ವಾರಿಜಾಕ್ಷನ ಪಾದ ವನಜವನು ಪೊಗಳಿದೊಡೆ
ಚಾರುತರ ಸಾಮ್ರಾಜ್ಯ ಸಂಪದವು ಸಿದ್ಧಿಪುದು
ಧಾರಿಣಿಯೊಲತ್ಯಧಿಕವೆನಿಪ ಘಂಟಾಪುರಿಯ
ನಾರಾಯಣನ ಕರುಣದಿ ||37||