ತಂಗದಿರನನಿಮಿಷ ತಾರಕೆಗಳು

Category: ಶ್ರೀನರಸಿಂಹ

Author: ಕನಕದಾಸ

ತಂಗದಿರನನಿಮಿಷ ತಾರಕೆಗಳು ಮಸುಳಿಸೆ ಪ
ತಂಗ ಪರ್ವತವನಡರಿ ಬಂದನು
ಜಂಗಮಗಳೆದ್ದು ಜಯಜಯವೆನುತಿರೆ ನರ
ಸಿಂಗನೊಲಿದುಪ್ಪವಡಿಸೊ ಹರಿಯೆ ||ಪ||

ಮೂಡುಗಡೆ ಮುಗಿಲು ಕೆಂಪಾದುದಡವಿಯ ತಾಮ್ರ
ಚೂಡ ಕಾಳೋದರವು ಕೋಗಿಲೆಗಳುಲಿಯುತಿರೆ
ನಾಡ ನಾನಾ ತಪೋಧನರು ತತ್ಕಾಲದಲಿ
ಬೀಡ ಹೊರಹೊಂಟು ನಡೆದುದು
ಕ್ರೋಡದಂಷ್ಪ್ರಜೆ ಕೃಷ್ಣವೇಣಿಯ ವರುಣೆ
ಕೂಡಿ ಗಂಗಾಸ್ನಾನಗಳ ಮಾಡಲುದ್ಯೋಗಿಸಿದರಖಿಳ
ಸಾಧುಗಳು ಅರಿವಿಭಾಡನೊಲಿದುಪ್ಪವಡಿಸೊ ಹರಿಯೆ ||1||

ಕುಗ್ಗಿದುವು ಕುಮುದ ಕುಂದ ಚಕೋರಾದಿಗಳು ಭುಜ
ಹಿಗ್ಗಿದುವು ಚಕ್ರವಾಕಾಕಾಶದಲಿ ನೆರೆದು
ಮೊಗ್ಗಿದುವು ಮಧುಪ ಸಂಕುಲ ಪುಷ್ಪವಾಟಿಯೊಳು
ಜಗ್ಗಿದುವು ಜಡಿವ ತೆರದಿ
ವರಕವಿಗಳೆದೆಯ ಮಧುರೋಕ್ತಿ ಎನಿಸಿ
ನೆಗ್ಗಿದುವು ನಿಜಕುಲಾದ್ರಿಗಳಲಿ ಭಾನುವಿನ ಕಿರಣ
ನುಗ್ಗಿ ಪೃಥ್ವಿಯೊಳು ಪಸರಿಸಿತು ಅನರ್ಘ್ಯನೊಲಿದುಪ್ಪ
ವಡಿಸಯ್ಯ ಹರಿಯೆ ||2||

ಅಂಜನಾಸೂನು ಫಣಿಪತಿ ಗರುಡ ಪ್ರಹ್ಲಾದ
ಕುಂಜರಾಧಿಪ ಬಲಿ ವಿಭೀಷಣ ಧ್ರುವ
ರಂಜಕದ ಮೋಹಿನಿಯ ಗೆಲಿದ ರುಕಮಾಂಗದನು
ಧನಂಜಯನಾತ್ಮಸಂಭವನ ಸಂಜಾತ ವಿದುರನಕ್ರೂರ
ಮುಂಜಾವದಲಿ ಮುಮುಕ್ಷುಗಳು ಬಂದರು ದಯಾ
ಪಂಜರವೊಲಿದುಪ್ಪವಡಿಸೊ ಹರಿಯೆ ||3||

ಶ್ವೇತಗಜ ಮಹಿಷ ಮಾನವ ನೆಗಳು ಏಣು ಸು
ಜಾತಶ್ವ ವೃಷಭ ಮೇಷ ವಾಹನರು
ಭೂತಳದೊಳಿದ್ದ ಮನುಮುನಿ ನಿರ್ಝರವ್ರಾತ ವಾಣೀಶನೊಡನೆ
ಆತ ತನ್ನಮಳ ಹಯವನೇರಿಕೊಂಡು ಪ್ರ
ಖ್ಯಾತ ದುಂದುಭಿಯ ರಭಸದೊಡನೆ ಚೇತ
ನಾತುಮಕನೆ ನಿನ್ನಯ ಬಳಿಗೆ ಬಂದರು ವಿಶ್ವ
ನಾಥನೊಲಿದುಪ್ಪವಡಿಸಯ್ಯ ಹರಿಯೆ ||4||

ತಾಳದಂಡಿಗೆ ಪಿಡಿದು ತುಂಬುರು ನಾರದರು ಭೂ
ಪಾಳಿ ದೇಶಾಕ್ಷಿ ನಾರಾಯಣಿ ಗುಜ್ಜರಿ
ಮಾಳವಿ ಶ್ರೀದೇವಿ ಗಾಂಧಾರಿ ಮಲಹರಿ
ಸಾಳಗವು ಸೌರಾಷ್ಟ್ರ ಗುಂಡಕ್ರಿಯಾ ಲಲಿತ
ಸುಳಾದಿಯಲಿ ನಾಮ ಕೀರ್ತನೆಗಳ ಪಾಡಿ
ಮೇಳೈಸಿ ವಾದ್ಯ ನೃತ್ಯಗಳಾಡುತಿಹರು ಪಶು
ಪಾಲನುಪ್ಪವಡಿಸೊ ಹರಿಯೆ ||5||

ಮೂಜಗದ ವ್ಯವಹಾರಿ ಮುಂಕೊಂಡು ಭರ
ದ್ವಾಜ ರೋಮಷ ಅತ್ರಿ ಗಾರ್ಗೇಯ ಜಯ
ಜಯಾಸನ ಶುಕ ಪರಾಶರ ರಿಪುಮಾನ್ಯ ಪ
ಯೋಜಸಂಭವ ಸಂತತಿ
ಭೋಜವರ ಭೃಗು ಕಪಿಲ ಮಾರಹರ ಗೌತ
ಮಜಾನುಜ ಋಷಿ ಕೌಶಿಕ ವಶಿಷ್ಠ
ಬೀಜಾಕ್ಷರದ ಕೀರ್ತನೆಗೈದು ಇನಕೋಟಿ
ತೇಜನೊಲಿದುಪ್ಪವಡಿಸಯ್ಯ ಹರಿಯೆ ||6||

ವಾಗೀಶ ಬೃಹಸ್ಪತಿ ಹಜಾರದೊಳು ತಲೆ
ದೂಗಿ ಶ್ರುತಿಶಾಸ್ತ್ರದಲಿ ಸ್ತುತಿಸಿಹರು
ನಾಗಿಣಿಯರಮರಲೋಕದ ನರ್ತಕಿಯರು
ಬಾಗಿಲೊಳು ಮಂಗಳೋದಕವಿಡಿದು ಕೆಲವರು
ರಾಗಿಸುತ ರತ್ನದಾರತಿಯ ತಾಳ್ದರು
ಕಾಗಿನೆಲೆಯಾದಿಕೇಶವರಾಯನಮರ ಸಂಯೋಗಿ
ಒಲಿದುಪ್ಪವಡಿಸಯ್ಯ ಹರಿಯೆ ||7||