ಹಂಸ ನಿನ್ನಲಿ ನೀ ನೋಡೋ
Category: ಶ್ರೀಕೃಷ್ಣ
Author: ಪುರಂದರದಾಸ
ಹಂಸ ನಿನ್ನಲ್ಲಿ ನೀ ನೋಡೋ | ಭವ -
ಪಾಶಮುಕ್ತನಾಗಿ ಹರಿಯನ್ನು ಕೂಡೋ ||
ಪಕ್ಕಗಳೆರಡುಂಟು ನಿನಗೆ | ನೀ
ಹೊಕ್ಕು ಹೋಗುವೆ ಮೂರು ಪಂಜರದೊಳಗೆ |
ಲೆಕ್ಕವಿಲ್ಲದ ದಾರಿ ನಿನಗೆ | ಈಗ
ಸಿಕ್ಕಿದೆಯೋ ಮಾಯಾಪಾಶದೊಳಗೆ ||
ಹಬ್ಬದ ಸವಿಗೆ ನೀ ಬಂದೆ | ಬಲು
ಕೊಬ್ಬಿಲಿ ಕಾಣದೆ ವಿಷದೊಳು ಬಿದ್ದೆ |
ದಿಬ್ಬಣದಲಿ ಮೈಯ ಮರೆತೆ | ನೀ
ಒಬ್ಬನೆ ಹೋಗಿ ಕಾಲಕ್ಕೆ ಗುರಿಯಾದೆ ||
ಯಾರಿಗೆ ಯಾರು ಮತ್ತಿಲ್ಲ | ನಡು -
ದಾರಿಯೊಳಗೆ ಕೈಯ ಬಿಡುವರೆ ಎಲ್ಲ |
ದೂರ ಹೋಯಿತು ಪ್ರಾಯವೆಲ್ಲ| ಸಿರಿ
ಪುರಂದರವಿಟ್ಠಲನಲ್ಲದೆ ಬೇರೆಯಿಲ್ಲ ||