ಹಾಂಗೆ ಇರಬೇಕು
Category: ಶ್ರೀಕೃಷ್ಣ
Author: ಪುರಂದರದಾಸ
ಹಾಂಗೆ ಇರಬೇಕು ಸಂಸಾರದಲ್ಲಿ
ಹ್ಯಾಂಗೆ ಬರೆದಿತ್ತೊ ಪ್ರಾಚೀನದಲ್ಲಿ||
ಪಕ್ಷಿ ಅಂಗಳದಲ್ಲಿ ಬಂದು ಕೂತಂತೆ
ಆ ಕ್ಷಣದಲ್ಲಿ ಹಾರಿ ಹೋದಂತೆ ||
ನಾನಾ ಪರಿಯಲಿ ಸಂತೆ ನೆರೆದಂತೆ
ನಾನಾ ಪಂಥವ ಹಿಡಿದು ಹೋದಂತೆ ||
ಮಕ್ಕಳು ಆಡಿ ಮನೆ ಕಟ್ಟಿದಂತೆ
ಆಟ ಸಾಕೆಂದು ಅಳಿಸಿ ಪೋದಂತೆ ||
ವಸತಿಕಾರನು ವಸತಿ ಕಂಡಂತೆ
ಹೊತ್ತಾರೆದ್ದು ಹೊರಟು ಹೋದಂತೆ ||
ಸಂಸಾರಪಾಶವ ನೀನೇ ಬಿಡಿಸಯ್ಯಾ
ಕಂಸಾರಿ ಪುರಂದರವಿಟ್ಠಲರಾಯ ||