ಗುರುವಿನ ಗುಲಾಮನಾಗುವ ತನಕ

Category: ಶ್ರೀಗುರು

Author: ಪುರಂದರದಾಸ

ಗುರುವಿನ ಗುಲಾಮನಾಗುವ ತನಕ
ದೊರೆಯದಣ್ಣ ಮುಕುತಿ
ಪರಿ ಪರಿ ಶಾಸ್ತ್ರವನೋದಿದರೇನು?
ವ್ಯರ್ಥವಾಯಿತು ಭಕುತಿ ||

ಆರು ಶಾಸ್ತ್ರವ ಓದಿದರೇನು?
ಮೂರು ಪುರಾಣವ ಮುಗಿಸಿದರೇನು?
ಸಾಧು ಸಜ್ಜನರ ಸಂಗವ ಮಾಡದೆ
ಧೀರನೆಂದು ತಾ ತಿರುಗಿದರೇನು? ||

ಕೊರಳೊಳು ಮಾಲೆ ಧರಿಸಿದರೇನು?
ಬೆರಳೊಳು ಜಪಮಣಿ ಎಣಿಸಿದರೇನು?
ಮರಳಿ ಮರಳಿ ತಾ ಹೊರಳಿ ಬೂದಿಯೊಳು
ಮರುಳನಂತಾಗಿ ತಿರುಗಿದರೇನು? ||

ನಾರಿಯ ಭೋಗ ಅಳಿಸಿದರೇನು?
ಶರೀರಸುಖವನು ಬಿಡಿಸಿದರೇನು?
ಮಾರಜನಕ ಶ್ರೀಪುರಂದರ ವಿಠ್ಠಲನ
ಸೇರಿಕೊಂಡು ತಾ ಪಡೆಯುವ ತನಕ ||