ಏಕೆ ದೂರನಾದೆ ನೀನು ರಾಮಕೃಷ್ಣನೆ?

Category: ಶ್ರೀರಾಮಕೃಷ್ಣ

Author: ಸ್ವಾಮಿ ನಿತ್ಯಸ್ಥಾನಂದ

ಏಕೆ ದೂರನಾದೆ ನೀನು ರಾಮಕೃಷ್ಣನೆ?
ಏಕೆ ಎನ್ನ ಕರೆಗೆ ಒಲಿಯೆ ಒಲುಮೆ ಹೃದಯನೆ

ಅಂದು ನೀನು ಹಗಲು ಇರುಳು ಮಾತನಾಡಿದೆ,
ಇಂದು ಏಕೆ ಇಷ್ಟು ಮೌನ ತಿಳಿಯದಾಗಿದೆ
ಅಂದು ಎನಿತೊ ನಕ್ಕು ನಲಿದೆ ಭಕುತವೃಂದದಿ,
ಇಂದು ಎನ್ನ ಹೃದಯದಲ್ಲಿ ನಲಿಯಲಾರೆಯ?

ದೃಷ್ಟಿಪಾತದಿಂದ ಹಲವು ಜೀವ ಸಲಹಿದೆ,
ಈಗ ನೀನು ಕಣ್ಣ ತೆರೆದು ನೋಡಲಾರೆಯ?
ನಿನ್ನ ಸ್ಪರ್ಶ ಅಮೃತವರ್ಷವೆಂದು ಕೇಳಿದೆ,
ಏಕೆ ನಾನು ಅಸ್ಪೃಶ್ಯ ನಿನ್ನ ಪಾಲಿಗೆ?

ನಿನ್ನ ಗಾನ ಸುಖನಿಧಾನವೆಂದು ತಿಳಿದಿಹೆ
ಆದರೆನಗೆ ಅದರ ಪಾನ ದಕ್ಕದಾಗಿದೆ
ನಿನ್ನ ಮೊಗದ ಕಾಂತಿ ಸೊಗವ ಸವಿಯದಾದೆ ನಾ
ಎಷ್ಟು ಕಾಲ ಅವಿತು ನಿಂತು ಶೋಕವೀಯುವೆ?