ಕಬೀರ ಬೀರಿದ ಬೆಳಕು

Category: ಇತರೆ

Author: ಸ್ವಾಮಿ ಪುರುಷೋತ್ತಮಾನಂದ

ಗುರುವಿಗೆ ವಂದನೆ ಮೊದಲು
ನಂತರ ಗಣಪತಿಗೆ |
ಬಳಿಕ ದೇವಿ ಶ್ರೀಶಾರದೆಗೆ
ಇವರ ಕೃಪೆಯು ನಮಗೆ - ಕಬೀರಾ॥

ಸದ್ಗುರು ಮಹಿಮೆ ಅನಂತ
ಸದ್ಗುರು ಕೃಪೆಯೂ ಅನಂತ ।
ಅವನ ನಯನಗಳು ಅನಂತವೈ
ತೋರಿದನವನು ಅನಂತ - ಕಬೀರಾ॥

ತೀರ್ಥಯಾತ್ರೆಗೆ ಫಲ ಒಂದು
ಸಾಧುಸಂಗಕೆ ನಾಲ್ಕು |
ಸದ್ಗುರುಸಂಗಕೆ ಅನೇಕ ಫಲವು
ಇದುವೇ ಸಂತರ ಮತವು - ಕಬೀರಾ॥

ಸದ್ಗುರು ಬೋಧಿಸೆ ಶಿಷ್ಯನು
ಸದ್ಗುರುವೆ ಆದನು ।
ಇದ್ದಿಲು ಬೆಂಕಿಯ ಸ್ಪರ್ಶದಿಂದ
ಬೆಂಕಿಯೆ ಆದಂತೆ - ಕಬೀರಾ॥

ಉತ್ತಮ ಜನ್ಮ ದೊರೆಯುವುದು
ಇದುವೇ ಹರಿಕೃಪೆಯ್ಯೆ | ,
ಜನ್ಮವಿಲ್ಲದಂತಾಗುವುದು
ಇದುವೇ ಗುರುಕೃಪೆಯ್ಯೆ - ಕಬೀರಾ॥

ಪ್ರೇಮವೆ ಇಲ್ಲದ ಮನುಜ
ಪ್ರಾಣಿಗೆ ಸಮ ತಿಳಿಯೋ |
ಗಾಳಿಯಾಡಿದರು ಪ್ರಾಣವಿರದ
ಕಮ್ಮಾರನ ತಿದಿಯೋ - ಕಬೀರಾ॥

ನಾನು ಇದ್ದಾಗ ದೇವನಿಲ್ಲ
ಈಗ ದೇವನಿಹ ನಾನಿಲ್ಲ |
ಕತ್ತಲು ಕರಗಿಯೆ ಹೋಯಿತಲ್ಲ
ಬೆಳಕ ಕಂಡೆನಲ್ಲ - ಕಬೀರಾ॥

ನನ್ನದೆಂಬುದೇನಿಲ್ಲ
ಇರುವುದು ನಿನ್ನದೆ ಎಲ್ಲ |
ನಿನ್ನದೆ ನಿನಗೆ ಅರ್ಪಿಸುತಲಿ
ನೆಮ್ಮದಿಯಿಂದಿರುವೆ - ಕಬೀರಾ॥

ಚಂದ್ರನ ತಂಪು ತಂಪಲ್ಲ
ಹಿಮದ ತಂಪೂ ತಂಪಲ್ಲ |
ಸಾಧುಸಂತರ ದಿವ್ಯ ಸಂಗ
ತಂಪಿನಲೂ ತಂಪು - ಕಬೀರಾ॥

ಸಂತರ ಸೇವೆಯು ನಡೆಯದ ಮನೆಯು
ಅವಲಕ್ಷಣಗಳ ತಾಣ |
ಆ ಮನೆ ಮಸಣವು ಎಂದು ತಿಳಿದು
ಭೂತಗಳಾಡುವುವು - ಕಬೀರಾ॥

ಸ್ವತಃ ರಾಮ ಕರೆದಾಗಲೂ
ಕಬೀರಗೇನೋ ದುಗುಡ |
ಸಾಧುಸಂಗದಲಿ ದೊರೆವಾನಂದ
ವೈಕುಂಠದಲೂ ಇಲ್ಲ - ಕಬೀರಾ॥

ಭೂಮಿ ಸಹಿಸುವುದು ಅಗೆಯುವುದ
ಕಡಿಯುವುದನು ಮರವು |
ಸಾಧು ಸಹಿಸುವನು ಕಠಿಣ ವಚನವ
ಸಹಿಸರು ಇನ್ನಾರು - ಕಬೀರಾ ||

ದೇವನ ದಾರಿಯು ಸುಗಮ
ನಿನ್ನ ನಡೆಯೆ ವಕ್ರ |
ಕುಣಿಯಲು ಬಾರದ ನರ್ತಕನು
ನೆಲವೇ ಡೊಂಕೆಂದ - ಕಬೀರಾ॥

ದೇಹಧಾರಿ ಯಾರೇ ಇರಲಿ
ದಂಡವ ತೆರಬೇಕು |
ಅಜ್ಞಾನಿ ತೆರುವನು ರೋದಿಸುತ
ಜ್ಞಾನಿಯು ನಗುನಗುತ - ಕಬೀರಾ ||

ಜಗದೀಶಗೆ ಶರಣಾದವನು
ಅವ ಹೆದರುವನೇನು?
ಆನೆಯ ಮೇಲೆ ಕುಳಿತಿರುವವಗೆ
ಶ್ವಾನವು ಬೊಗಳಿದರೇನು? - ಕಬೀರಾ ||

ನಿಂದಕರಿಗೊಂದು ಕುಟಿಯನು ಕಟ್ಟಿ
ಮನೆ ಮುಂದಿರಗೊಡಿರಿ |
ನೀರು-ಸಾಬೂನುಗಳಿಲ್ಲದೆಯೇ
ನಿರ್ಮಲಗೊಳಿಸುವರು - ಕಬೀರಾ ||

ಗೋಧನ ಗಜಧನ ರತ್ನಧನ
ಏನದ್ಭುತ ಜನಧನ |
ಸಂತೋಷಧನವು ದೊರೆತಾಗ
ಎಲ್ಲವು ಧೂಳಿ ಸಮಾನ - ಕಬೀರಾ ||

ರಾತ್ರಿ ಕಳೆಯಿತು ನಿದ್ರೆಯಲಿ
ದಿನ ಕಳೆಯಿತು ಊಟದಲಿ |
ರತ್ನದಂಥ ಈ ನರಜನ್ಮ
ಮೂರ್ಕಾಸಿಗೆ ಹೋಯ್ತು - ಕಬೀರಾ ||

ಅಂತಹ ಧನವನೆ ಗಳಿಸಲುಬೇಕು
ಪರಗತಿಗು ಆಗಬೇಕು |
ಹೊರಡುವ ದಿನ ಅದ ಒಯ್ಯುವಾಗ
ಕಾಣರು ಅದನ್ಶಾರು - ಕಬೀರಾ॥

ಎತ್ತಣಿಂದ ನೀ ಬಂದೆಯೋ
ಹೋಗುವುದು ಎತ್ತಲೋ |
ಇತ್ತಿಂದತ್ತ ಅತ್ತಿಂದಿತ್ತ
ಮೂಲ ಮರೆತೆಯಲ್ಲೊ - ಕಬೀರಾ॥

ಬೀಜದೊಳಗೆ ಇದೆ ಎಣ್ಣೆ
ಹಾಲಿನೊಳಗೆ ಇದೆ ಬೆಣ್ಣೆ |
ನಿನ್ನಯ ದೇವ ನಿನ್ನೊಳಗಿಹನೈ
ಕೈಲಾದರೆ ನೋಡೈ - ಕಬೀರಾ॥

ಮಾಯೆಯೊಂದು ಉರಿಯುವ ದೀಪ
ಮನುಜನೇ ಪತಂಗ |
ಪತಂಗ ದೀಪದಿ ಬೀಳುವ ತೆರದಿ
ಮನುಜ ಮಾಯೆಯೊಳಗೆ - ಕಬೀರಾ||

ಜಪಮಾಲೆಯು ತಿರುಗುತಲೇ
ಉರುಳಿತು ಯುಗವೊಂದು |
ಚಂಚಲ ಮನದ ತಿರುಗಾಟ
ನಿಲ್ಲಲಿಲ್ಲವಿನ್ನೂ - ಕಬೀರಾ ||

ಮೈತೊಳೆದರೆ ಏನಾಯಿತು
ಮನದ ಕೊಳೆಯು ಹೋದೀತೆ? |
ಮನವನು ಮಥಿಸಿ ವಿವೇಚನೆ ನಡೆಸೆ
ಮನ ನಿರ್ಮಲವಹುದು - ಕಬೀರಾ ||

ಯತಿಗಳ ಜಾತಿಯ ಕೇಳಬೇಡ
ಅವರ ಜ್ಞಾನವನು ನೋಡು |
ಖಡ್ಗದ ಬೆಲೆಯನು ಮಾತ್ರ ಕಟ್ಟು
ಒರೆಯನು ಬದಿಗಿಟ್ಟು - ಕಬೀರಾ||

ಕೆಡುಕರನು ನಾ ಹುಡುಕುತ ಹೊರಟೆ
ಕೆಡುಕರಾರು ಸಿಗಲಿಲ್ಲ |
ನನ್ನಯ ಮನವನು ನಾನೇ ನೋಡೆ
ನನಗಿಂತ ಕೆಡುಕರಿಲ್ಲ - ಕಬೀರಾ ||

ಕುಟಿಲವಚನ ಬಲು ಕೆಟ್ಟದು
ಮನ ವಿಷಮಯವಹುದು |
ಸಾಧುವಚನ ಪರಿಶುದ್ಧ ಮಧುರ
ಸುಧೆಯನೆ ಸುರಿಸುವುದು - ಕಬೀರಾ ||

ಆಡುವ ನುಡಿ ಇಂತಿರಬೇಕು
ಶಾಂತಿ ನೆಲಸಬೇಕು |
ಇತರರ ಶಾಂತಿಗೆ ಶ್ರಮಿಸುತ ನಾವೇ
ಶಾಂತಿಯ ಪಡೆಯುವೆವು - ಕಬೀರಾ ||

ಶೀಲವಂತನೇ ಶ್ರೇಷ್ಠನು
ಸಕಲ ರತ್ನಗಳ ಗಣಿಯು |
ಮೂಲೋಕದ ಸಿರಿಸಂಪದವೆಲ್ಲ
ಶೀಲದೊಳಗೆ ಇಹುದು - ಕಬೀರಾ ||

ಮಾತಿನ ಗದ್ದಲ ನಿಲ್ಲಿಸಿ
ಸ್ಮರಣೆಯ ಸುಖದಲಿ ಮುಳುಗೋ |
ಹೊರಗಿನ ಪರದೆಯ ಮುಚ್ಚಿ ನೀನು
ಒಳಗಣ ಪರದೆಯ ತೆರೆಯೋ - ಕಬೀರಾ ||

ಭಜಿಸುವುದಾದರೆ ಈಗಲೆ ಭಜಿಸು
ಇನ್ನೆಂದಿಗೆ ಭಜಿಸುವುದು।
ಹಚ್ಚ ಹಸಿರು ವೃಕ್ಷವು ಕೂಡ
ಕಟ್ಟಿಗೆಯಾಗುವುದು - ಕಬೀರಾ||

ಮಲಗಿದ್ದರೆ ಏನಹುದು
ಎದ್ದು ಜಪವ ಮಾಡು |
ಮಲಗಲೊಂದು ದಿನ ಬರಲಿಹುದು
ಕಾಲುದ್ದಕೆ ಚಾಚಿ - ಕಬೀರಾ ||

ಕರದಲಿ ಮಾಲೆಯು ತಿರುಗುವುದು
ಬಾಯಲಿ ನಾಲಿಗೆಯು |
ದಶದಿಶೆಯಲಿ ಮನ ತಿರುಗುವುದು
ಇದೇ ಇವರ ಜಪವು - ಕಬೀರಾ||

ರಾಜ ರಾಯ ಸಿರಿವಂತನಿಗಿಂತ
ಸ್ಮರಿಸುವವನೆ ದೊಡ್ಡವ |
ಯಾವ ಕಾಮನೆಯು ಇಲ್ಲದ ಅವನು
ದೊಡ್ಡವರಲು ದೊಡ್ಡವ - ಕಬೀರಾ ||

ಹಿಡಿದು ತಿನ್ನುವನು ಯಮರಾಯ
ಅವನಾರನು ಬಿಡನು |
ನಾಮದ ಪ್ರೇಮಿಯ ಕಂಡೊಡನೆ
ಗಡಗಡ ನಡುಗುವನು - ಕಬೀರಾ॥