ಈ ಜಗವ ನಂಬಿ ಸುಖವೇ ಇಲ್ಲ

Category: ವೈರಾಗ್ಯ

Author: ಸ್ವಾಮಿ ಪುರುಷೋತ್ತಮಾನಂದ

ಈ ಜಗವ ನಂಬಿ ಸುಖವೇ ಇಲ್ಲ |
ಪಾರು ಮಾಡು ದೇವಾ ||

ಒಂದು ಸುಖಕೆ ನೂರು ದುಗುಡ
ಇದುವೇ ಜಗದ ವೈಭವ ||

ಜನರ ದೂರಲೇಕೆ ನಾವು
ಅವರೆ ಕಷ್ಟದಲ್ಲಿ ಇಹರು |
ಅವರ ಚಿಂತೆ ಅವರಿಗೆ ಇಹುದು
ನಮ್ಮ ಚಿಂತೆ ಯಾರಿಗೆ ಮುದ್ದು? ||

ಮನುಜ ತನ್ನ ಮಿತಿಯನು ಅರಿಯ
ಕಟ್ಟುತಿಹನು ಗಗನದಿ ಮನೆಯ |
ಸುಖದಿ ಬಾಳ್ವೆನೆಂದು ದುಡಿದ
ಬಾಳು ಮುಗಿವ ಮೊದಲೇ ಮಡಿದ ||

ಎಷ್ಟು ಸಾವು ಏನು ನೋವು
ಇದಕೆ ಆದಿ ಅಂತ್ಯವೆ ಇಲ್ಲ |
ಆಸೆ ಪಟ್ಟು ಪಡೆದುದನೆಲ್ಲ
ಇಲ್ಲೇ ಬಿಟ್ಟು ನಡೆಯುವರೆಲ್ಲ ||

ಹೇ ದೇವ ನೀನೊಬ್ಬನೇ ಆತ್ಮೀಯ ಬಂದು ಎನಗೆ |
ಪ್ರೀತಿ ನೀಡುವವರಲ್ಲಿ ನಿನ್ನನ್ನು ಬಿಟ್ಟರಿಲ್ಲ ||