ನಿಶ್ಚಿಂತನಾಗಬೇಕಂತಿ
Category: ಜಾನಪದ ಗೀತೆ
Author: ಶಿಶುನಾಳ ಷರೀಫ್
ನಿಶ್ಚಿಂತನಾಗಬೇಕಂತಿ। ಬಹು
ದುಶ್ಚಿಂತಿಯೊಳಗ ನೀ ಕುಂತಿ॥।
ಯಾಕೋ ಎಲಾ ನಿನಗ ಭ್ರಾಂತಿ
ನಾಳೆಗಾಗುವೋದೀಗಂತಿ ||
ಆಶಾಪಾಶಗಳ ಬ್ಯಾಡಂತಿ | ಒಳ್ಳೇ
ಮೀಸಲ ನುಡಿ ಮಾತಾಡಂತಿ |
ಭಾಷೆ ಕೊಟ್ಟು ತಪ್ಪಬ್ಯಾಡಂತಿ। ಹರಿ-
ದಾಸರೊಳಗ ಮನ ನೀಡಂತಿ ||
ಅವರನ ಕಂಡರ ಅವರಂತಿ। ಮ-
ತ್ತಿವರನ ಕಂಡರೆ ಇವರಂತಿ |
ಅರಿವು ಅರಿಯದ ತನಗೂ ತಿಳಿಯದ
ಮೂಢನಾಗಿ ಸುಮ್ಮನೆ ಕುಂತಿ ||
ಪೊಡವಿಯೊಳಗ ಶಿಶುನಾಳಂತಿ | ಗುರು
ಗೋವಿಂದ ಯೋಗೀ ಚಿಂತಿ |
ಬಿಡದಾತನ ಸೇವೆ ಮಾಡಂತಿ | ಭವ-
ವಿಲ್ಲದ ಗುರುವಿನ ಕೂಡಂತಿ॥