ಮಾಯೆಯಾ ಸೂತ್ರದಲಿ ಬಿಗಿದ ಪಟವೇರುತಿದೆ
Category: ಶ್ರೀದೇವಿ
Author: ವಚನವೇದ
ಖಮಾಜ್-
ಪಟವನಾಡಿಸುತಿಹಳು ಈ ನನ್ನ ಘನಶ್ಯಾಮೆ
ಜಗದ ಸಂಸಾರಗಳ ಪೇಟೆಯಲ್ಲಿ |
ಮಾಯೆಯಾ ಸೂತ್ರದಲಿ ಬಿಗಿದ ಪಟವೇರುತಿದೆ
ತುಂಬಿರುವ ಭರವಸೆಯ ಗಾಳಿಯಲ್ಲಿ ||
ಮಧ್ಯಮಾವತಿ-
ನರರಸ್ಥಿಪಂಜರದಿ ಮೂರು ಗುಣಗಳ ಬೆಸೆದು
ಮಾಡಿರುವಳೀ ತಾಯಿ ಕುಶಲಕಲೆಯ |
ಪಟದ ಸೂತ್ರದ ಮೇಲೆ ವಿಷಯದಂಟನು ಬಳಿದು
ಹರಿಯದಂತವುಗಳನು ರಚಿಸಿರುವಳು||
ಯಮನ್-
ಇಂತು ಹಾರುವ ನೂರುಸಾವಿರದ ಪಟಗಳಲಿ
ಒಂದೊ ಎರಡೊ ಹರಿದು ಬಿಡುಗಡೆಯ ಪಡೆದು |
ಹೋಗುತಿರಲವುಗಳನು ನಿರುಕಿಸುತ ಈ ತಾಯಿ
ಕೈಯ ಚಪ್ಪಳೆ ತಟ್ಟಿ ನಲಿಯುತಿಹಳು ||
ದುರ್ಗಾ-
ರಾಮಪ್ರಸಾದನಿದೋ ನುಡಿಯುವನು: "ಓ ತಾಯಿ
ಅನುಕೂಲ ಮಾರುತವು ಬೀಸುವಾಗ |
ನೀನಿನಿತು ಕೃಪೆಗೈದು ಕೈ ಸಡಿಲಗೊಳಿಸಿದರೆ
ಎನಿತೊ ಪಟ ದಾಟುವುವು ಭವಜಲಧಿಯ!"