ಅವ್ಯಕ್ತದಿಂದುದಿಸಿ ವ್ಯಕ್ತವೇಷವ ಧರಿಸಿ

Category: ಶ್ರೀರಾಮಕೃಷ್ಣ

Author: ಹೆಚ್ ಎನ್ ಮುರಳೀಧರ

ಅವ್ಯಕ್ತದಿಂದುದಿಸಿ ವ್ಯಕ್ತವೇಷವ ಧರಿಸಿ
ನಿಂದಿರುವ ಮಾಂತ್ರಿಕನು ಪುಂಗಿ ನುಡಿಸೆ |
ಆ ಅನಾಹತ ನಾದ ಜಗವ ಜುಮ್ಮೆನಿಸಿತ್ತು
ಸಕಲ ಸಚರಾಚರವ ಮರುಳುಗೊಳಿಸೆ ||

ನಾಮರೂಪಾತೀತನೆಂಬ ಹೆಸರನು ಹೊತ್ತು
ಕಾಲದೇಶದ ಗಡಿಗಳಾಚೆಯಿಂದಡಿಯಿಟ್ಟು
ಬಂದು ಮೈದೋರಿರುವ ಮಂತ್ರಗಾರ |
ವೈರಾಗ್ಯವೇತ್ರವನು ಗರಗರನೆ ತಿರುಗಿಸುತ
ಭವಭ್ರಾಂತಿಯನ್ನೊದೆದ ತಂತ್ರಗಾರ ||

ಸರ್ವಧರ್ಮಗಳನ್ನು ಮಣಿಗಳನೆ ಮಾಡುತ್ತ
ತನ್ನ ಸಿರಿಬಾಳ ಶ್ರೀಸೂತ್ರದಲಿ ಪೋಣಿಸುತ
ತಾನೆ ಧರಿಸುತ ಮೆರೆದ ಸೂತ್ರಧಾರ |
ವಚನವೇದದ ಮಧುರ ಮಂತ್ರಘೋಷವ ಮೊಳಗಿ
ಲೌಕಿಕವ ಕಳೆವ ಪರಮಾರ್ಥಸಾರ ||